ಬೆಂಗಳೂರು: ನವೀಕರಣಗೊಂಡು ಉದ್ಘಾಟನೆಯಾಗಿರುವ ಗುಜರಾತ್ನ ಮೋಟೆರಾ ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಬಾಯ್ ಪಟೇಲ್ ಹೆಸರು ತೆಗೆದು ಪ್ರಧಾನಿ ನರೇಂದ್ರ ಮೋದಿ ಹೆಸರು ಇರುವುದಕ್ಕೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ಹೊರಹಾಕಿರುವ ಅವರು, ಮೊದಲಿನ ಹೆಸರು ಸರ್ದಾರ್ ವಲ್ಲಭಾಯ್ ಪಟೇಲ್ ಕ್ರೀಡಾಂಗಣ. ಈಗಿನ ಹೆಸರು ನರೇಂದ್ರ ಮೋದಿ ಕ್ರೀಡಾಂಗಣ. ನರೇಂದ್ರ ಮೋದಿಯವರೇ ನಿಮಗಿದು ಬೇಕಿತ್ತಾ?. ದೇಶದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ರಿಗೆ ನೀವು ಮಾಡಿದ ಅವಮಾನ ಅಲ್ಲವಾ ಇದು?. ನೀವು ಯಾವ ಸಾಧನೆ ಮಾಡಿದ್ದೀರಿ ಎಂದು ಸರ್ದಾರ್ ಪಟೇಲ್ರ ಹೆಸರಿನಲ್ಲಿದ್ದ ಕ್ರಿಡಾಂಗಣಕ್ಕೆ ನಿಮ್ಮ ಹೆಸರಿಟ್ಟುಕೊಂಡಿರಿ..?. ಇದುದೇಶವನ್ನೇ ಒಗ್ಗೂಡಿಸಿದ ಸರ್ದಾರ್ ಪಟೇಲ್ರಿಗೆ ಮಾಡಿದ ಅಪಮಾನ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದರು.
ಪಟೇಲ್ರ ಹೆಸರಿನ ಮೊಟೆರಾ ಕ್ರೀಡಾಂಗಣವನ್ನು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಮರು ನಿರ್ಮಾಣ ಮಾಡಿದೆ. ವಿಶ್ವದ ದೊಡ್ಡ ಕ್ರೀಡಾಂಗಣ ಅನ್ನೊದು ದೇಶಕ್ಕೆ ಹೆಮ್ಮೆಯ ವಿಷಯವೇ. ಆದರೆ ಸರ್ದಾರ್ ಪಟೇಲ್ರ ಹೆಸರು ತೆಗೆದು ನಿಮ್ಮ ಹೆಸರೇಕೆ ಇಟ್ಟಿದ್ದೀರಿ ನರೇಂದ್ರ ಮೋದಿಯವರೇ..? ಎಂದು ಪ್ರಶ್ನಿಸಿದ್ದಾರೆ.
ಸರ್ದಾರ್ ಪಟೇಲ್ರ ಹೆಸರನ್ನು ಕಿತ್ತು ಹಾಕಿ ಅದನ್ನು ನರೇಂದ್ರ ಮೋದಿ ಸ್ಟೇಡಿಯಂ ಅನ್ನೋ ಹೆಸರಿಟ್ಟಿದ್ದಷ್ಟೇ ಅಲ್ಲ. ಈ ಸ್ಟೇಡಿಯಂನ ಉದ್ಘಾಟನೆಯನ್ನ ಈ ದೇಶದ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ಮಾಡಿದ್ದಾರೆ. ರಾಷ್ಟ್ರಪತಿಗಳಿಗಿಂತಲೂ ನರೇಂದ್ರ ಮೋದಿ ದೊಡ್ಡವರಾ ಈ ದೇಶದಲ್ಲಿ..? ಎಂದು ಕೇಳಿದ್ದಾರೆ.
ಸರ್ಕಾರದ ದುಂದುವೆಚ್ಚ ಸರಿಯಲ್ಲ...
ರಾಜ್ಯ ಸರ್ಕಾರ ಸಂಸದರ ಹಾಗೂ ಸಚಿವರ ಕಾರು ಖರೀದಿ ಮೊತ್ತ ಹೆಚ್ಚಳ ಮಾಡಿರುವುದನ್ನು ಖಂಡಿಸಿರುವ ಎಸ್ಆರ್ಪಿ, ಕೋವಿಡ್ ಕಾರಣ ಮುಂದಿಟ್ಟು ಪಿಂಚಣಿ, ಶಾಸಕರ ಅನುದಾನ, ನೌಕರರ ಸಂಬಳ, ಶಿಕ್ಷಕರ ಸಂಬಳ, ಅಭಿವೃದ್ಧಿ ಯೋಜನೆಗಳು, ನೆರೆ ಪರಿಹಾರ ಇದ್ಯಾವುದಕ್ಕೂ ಹಣ ಇಲ್ಲ ಅನ್ನೋ ಬಿಜೆಪಿ ಸರ್ಕಾರ ಈಗ ಮಂತ್ರಿಗಳು, ಸಂಸದರಿಗೆ ಐಷಾರಾಮಿ ಕಾರು ಖರೀದಿಗೆ ಕೋಟಿ-ಕೋಟಿ ಹಣ ಖರ್ಚು ಮಾಡುತ್ತಿದೆ ಎಂದು ಬೇಸರ ವ್ಯಕ್ತಿಪಡಿಸಿದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ ಐಷಾರಾಮಿ ಕಾರುಗಳ ಖರೀದಿ ಮಾಡುವ ತುರ್ತು ಅಗತ್ಯ ಇದೆಯಾ?. ಕರ್ನಾಟಕ ಸರ್ಕಾರದ ಬಳಿ ಇದ್ದ ಕಾರುಗಳೆಲ್ಲಾ ಏನಾದವು?. ಯಾರಾದರೂ ಕಳ್ಳತನ ಮಾಡಿದರಾ?. ಸರ್ಕಾರದ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ ಅಂತ ಪದೇ ಪದೇ ಹೇಳುವ ಬಿಎಸ್ ಯಡಿಯೂರಪ್ಪನವರೇ ಉತ್ತರಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.