ಬೆಂಗಳೂರು: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಬಹುತೇಕ ವಿಭಾಗಗಳನ್ನು ಮುಚ್ಚಲಾಗುತ್ತಿದೆ.
ಏಪ್ರಿಲ್ 28ರಿಂದ ಮೇ 11ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು, ಕುಲಸಚಿವರು(ಮೌಲ್ಯ ಮಾಪನ) ಮತ್ತು ವಿತ್ತಾಧಿಕಾರಿಗಳ ಅಪ್ತ ಕಾರ್ಯಾಲಯ/ ಕಚೇರಿಗಳು ಸೇರಿದಂತೆ ಅಭಿಯಂತರರ ವಿಭಾಗ, ಆರೋಗ್ಯ ಕೇಂದ್ರ ಮತ್ತು ಸಾರಿಗೆ ವಿಭಾಗಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಕಚೇರಿ ವಿಭಾಗಗಳು ಮುಚ್ಚಿರಲಿದೆ.
ಇನ್ನು ವಿಶ್ವವಿದ್ಯಾಲಯದ ಎಲ್ಲ ಬೋಧಕೇತರ ಸಿಬ್ಬಂದಿಗೆ ಮೇ 11ರ ವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಬೋಧಕೇತರ ಎಲ್ಲ ಸಿಬ್ಬಂದಿ ವರ್ಗದವರನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಗಳನ್ನು ಅವರ ಮೇಲಧಿಕಾರಿಯವರಿಗೆ ನೀಡಬೇಕು. ಈ ಅವಧಿಯಲ್ಲಿ ಬೋಧಕೇತರ ಸಿಬ್ಬಂದಿ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ.
ಹಾಗೇ ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿ ಸೇವೆಯು ಅಗತ್ಯವಿದ್ದಾಗ ಸಂಬಂಧಪಟ್ಟ ವಿಭಾಗ/ಕಚೇರಿಯ ಮುಖ್ಯಸ್ಥರು ಇಚ್ಚಿಸಿದಲ್ಲಿ ಅವರು ಬಯಸುವಂತಹ ಅಧಿಕಾರಿ/ ನೌಕರರುಗಳು ಯಾವುದೇ ಕಾರಣ ನೀಡದೇ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕಿದೆ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಎನ್ಜಿಒ ಹೆಸರಲ್ಲಿ ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಮಾರುತ್ತಿದ್ದ ಮೂವರ ಬಂಧನ