ಬೆಂಗಳೂರು: ರಾಜ್ಯದಲ್ಲಿ ಲೋಕಸಮರದ ಕಾವು ತಾರಕಕ್ಕೇರಿದ್ದು, ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಈಗಾಗಲೇ ಒಂದು ಹಂತದ ಚುನಾವಣೆ ಮುಗಿದಿದ್ದು, ಮತ್ತೊಂದು ಹಂತದ ಚುನಾವಣೆಗಾಗಿ ಪ್ರಚಾರ ಭರಾಟೆ ಹೆಚ್ಚಾಗಿದೆ. ಆದರೆ, ಇದರ ಜತೆಗೆ ನಿಂದನಾರ್ಹ ಹೇಳಿಕೆಗಳ ಭರಾಟೆಯೂ ತೀವ್ರವಾಗಿದೆ.
ಈಗಾಗಲೇ ಒಂದು ಹಂತದ ಚುನಾವಣೆ ಮುಗಿದಿದ್ದು, ಮತ್ತೊಂದು ಹಂತದ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಆದರೆ, ಇದೇ ವೇಳೆ ಅಭ್ಯರ್ಥಿಗಳು ಪರಸ್ಪರ ವಾಗ್ದಾಳಿಗಳ ಸುರಿಮಳೆಗೈಯ್ಯುತ್ತಿದ್ದಾರೆ. ಒಬ್ಬರನ್ನೊಬ್ಬರು ಕಾಲೆಳೆಯುತ್ತ, ಟೀಕಿಸುತ್ತಾ ಮತಬೇಟೆ ಮಾಡುತ್ತಿದ್ದಾರೆ. ಆದರೆ, ಒಬ್ಬರೊಬ್ಬರನ್ನು ಟೀಕಿಸುವ ಭರದಲ್ಲಿ ಅವಹೇಳನಕಾರಿ, ವೈಯ್ಯಕ್ತಿಕ ಟೀಕೆಗಳನ್ನೂ ಮಾಡುತ್ತಿರುವ ಪ್ರಕರಣಗಳೂ ಹೆಚ್ಚಾಗಿ ವರದಿಯಾಗುತ್ತಿದೆ.
ಚುನಾವಣಾ ಆಯೋಗಕ್ಕೆ ಹರಿದು ಬರುತ್ತಿದೆ 'ಅವಹೇಳನ' ದೂರುಗಳು:
ರಾಜ್ಯದಲ್ಲಿನ ಲೋಕಸಮರದಲ್ಲಿ ವೈಯಕ್ತಿಕ ದೂರುಗಳು, ಅವಹೇಳನಕಾರಿ ಹೇಳಿಕೆಗಳ ಭರಾಟೆ ಹೆಚ್ಚಾಗಿದೆ. ರಾಜಕೀಯ ಮುಖಂಡರು ತಮ್ಮ ಎದುರಾಳಿಗಳ ವಿರುದ್ಧ ಪ್ರಚಾರ ಸಭೆಗಳಲ್ಲಿ ವೈಯಕ್ತಿಕ ನಿಂದನೆ, ಟೀಕೆಗಳನ್ನು ಮಾಡುವ ಭರಾಟೆ ತೀವ್ರಗೊಂಡಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರುಗಳ ಸುರಿಮಳೆಯೇ ಹರಿದುಬರುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಸುಮಾರು 2,000ಕ್ಕೂ ಅಧಿಕ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ದಾಖಲಾಗಿವೆ. ಈ ಪೈಕಿ ವೈಯಕ್ತಿಕ ನಿಂದನೆಗಳ ಸಂಬಂಧದ ದೂರುಗಳು ಗಣನೀಯವಾಗಿವೆ. ಈ ಒಟ್ಟು ನೀತಿ ಸಂಹಿತೆ ಉಲ್ಲಂಘನೆ ದೂರುಗಳ ಪೈಕಿ ಸುಮಾರು 5-8 ಶೇ. ವೈಯಕ್ತಿಕ ಅವಹೇಳನಕಾರಿ ಪ್ರಕರಣಗಳಿವೆ. ಸುಮಾರು 150ಕ್ಕೂ ಹೆಚ್ಚು ಅವಹೇಳನಾ ಹೇಳಿಕೆಗಳ ಸಂಬಂಧಿತ ದೂರುಗಳಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಆಯೋಗದಿಂದ ಖಡಕ್ ಸೂಚನೆ:
ಇತ್ತ ಅವಹೇಳನಕಾರಿ ಹೇಳಿಕೆಗಳ ಸಂಬಂಧ ದೂರುಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳಿಗೆ ಖಡಕ್ ಸೂಚನೆಯನ್ನು ನೀಡಿದೆ. ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ರಾಜಕೀಯ ನಾಯಕರುಗಳಿಗೆ ತಾಕೀತು ಮಾಡಿದೆ.
ಈ ಸಂಬಂಧ ರಾಜಕೀಯ ಪಕ್ಷಗಳ ಜತೆಗೂ ಚುನಾವಣಾಧಿಕಾರಿಗಳು ಸಭೆ ನಡೆಸಿ, ಸಲಹೆ ಸೂಚನೆ ನೀಡಿದ್ದಾರೆ. ನಿಂದನಾ ಹೇಳಿಕೆಗಳನ್ನು ನೀಡಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುವ ಬಗ್ಗೆಯೂ ಮನವರಿಕೆ ಮಾಡುತ್ತಿದ್ದಾರೆ. ಆದರೂ ವೈಯ್ಯಕ್ತಿಕ ನಿಂದನೆಗಳ ಹೇಳಿಕೆಗಳಿಗೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.