ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಸ್ನೇಹಿತರನ್ನ ಸದ್ಯ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ತೀವ್ರವಾಗಿ ವಿಚಾರಣೆಗೆ ಒಳಪಡಿಸಿದೆ.
ಅಬ್ದುಲ್ ರೆಹಮಾನ್ ಬಸವನಗುಡಿ ನಿವಾಸಿಯಾಗಿದ್ದು, ಈತನ ಜೊತೆ ಸಂಪರ್ಕದಲ್ಲಿದ್ದ ಇಬ್ಬರು ಸ್ನೇಹಿತರನ್ನು ಎನ್ಐಎ ಈಗಾಗಲೇ ವಶಕ್ಕೆ ಪಡೆದಿದೆ. ಸದ್ಯ ಇಬ್ಬರು ಸ್ನೇಹಿತರು ಕೂಡ ಭಯೋತ್ಪಾದನಾ ಕೆಲಸದಲ್ಲಿ ಭಾಗಿಯಾಗಿದ್ದಾರಂತೆ. ಹೀಗಾಗಿ ನಗರದಲ್ಲಿ ಈ ಮೂವರ ಸಂಪರ್ಕದಲ್ಲಿ ಇನ್ನೂ ಯಾರಿದ್ದಾರೆಂಬ ಮಾಹಿತಿಯನ್ನ ಎನ್ಐಎ ತಂಡ ಗುಪ್ತವಾಗಿ ಕಲೆಹಾಕುತ್ತಿದೆ.
ಅಬ್ದುಲ್ ರೆಹಮಾನ್ನ ಓರ್ವ ಸ್ನೇಹಿತ ವೈದ್ಯಕೀಯ ವ್ಯಾಸಂಗ ಮಾಡಿದ್ದಾನೆ. ಮತ್ತೋರ್ವ ಎಂಜಿನಿಯರಿಂಗ್ ಓದಿದ್ದಾನೆ. ಇಬ್ಬರು ಕೂಡ ಐಸಿಸ್ ಜೊತೆ ನಂಟು ಹೊಂದಿದ್ದರು. ಅವರಿಗೆ ಬೇಕಾದ ವೈದ್ಯಕೀಯ ವ್ಯವಸ್ಥೆ, ಟೆಕ್ನಿಕಲ್ ಸಹಾಯ ಮಾಡಿದ್ರು. ಸದ್ಯ ಐಸಿಸ್ ಜೊತೆ ಸಂಪರ್ಕ ಇರುವುದಕ್ಕೆ ಬೇಕಾದ ಸಾಕ್ಷಿಗಳು ಎನ್ಐಎಗೆ ಲಭ್ಯವಾಗಿದೆ. ಹಾಗೂ ಅಮೆರಿಕಾ ಸೇನೆಯೊಂದಿಗೆ ಕಾದಾಟದಲ್ಲಿ ಗಾಯಗೊಂಡಿದ್ದ ಐಸಿಸ್ ಉಗ್ರರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ರೆಹಮಾನ್ ಹೊಗಿದ್ದ ಸಂದರ್ಭದಲ್ಲಿ ಇಬ್ಬರು ಸ್ನೇಹಿತರು ಜೊತೆಯಾಗಿ ಹೋಗಿ ಉಗ್ರರ ಸೇವೆ ಮಾಡಿ ವಾಪಸ್ ಆಗಿದ್ದ ವಿಚಾರ ಬಯಾಲಾಗಿದೆ.
ಇವರದ್ದೇ ವಾಟ್ಸ್ಆ್ಯಪ್ ಗ್ರೂಪ್:
ಆರೋಪಿಗಳು ತಮ್ಮ ಜಾಲ ಸೃಷ್ಟಿ ಮಾಡಲು ತಮ್ಮದೇ ವಾಟ್ಸ್ಆ್ಯಪ್ ಗ್ರೂಪನ್ನು ರೆಡಿ ಮಾಡಿಕೊಂಡಿದ್ದರು. ಆದರಲ್ಲಿ ಐಸಿಸ್ ಚಟುವಟಿಕೆ, ವಿದೇಶಗಳಿಗೆ ಹೋಗುವ ವಿಚಾರ ಇನ್ನಿತರೆ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಸದ್ಯ ಪೊಲೀಸರು ಮೂವರ ಮೊಬೈಲ್ಗಳನ್ನ ಜಪ್ತಿ ಮಾಡಿದ್ದು, ಇವರ ಜೊತೆ ಸಂಪರ್ಕದಲ್ಲಿರುವ ಇನ್ನಿತರೆ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಲು ಸಿಸಿಬಿ ಹಾಗೂ ಬೆಂಗಳೂರು ಪೊಲಿಸರ ಸಹಾಯ ಪಡೆದುಕೊಂಡಿರುವ ಎನ್ಐಎ, ತನಿಖೆ ಮುಂದುವರೆಸಿದೆ.