ಬೆಂಗಳೂರು : ರಾಜ್ಯದ ವಿವಿಧೆಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಚಿತ್ರಕಲಾ ಮತ್ತು ಕರಕುಶಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 17 ಶಿಕ್ಷಕರನ್ನು ಸೇವೆಯಿಂದ ಬಿಡುಗಡೆಗೊಳಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ವಸತಿ ಶಾಲೆಯಲ್ಲಿ ಖಾಲಿಯಿರುವ ಚಿತ್ರಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕರ ನೇಮಕಾತಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನಿಸಿದ್ದು ಉದ್ಯೋಗದಿಂದ ತಮ್ಮನ್ನು ಕೈಬಿಡಬಹುದೆಂಬ ಆತಂಕ ಎದುರಾಗಿ, ವಿಜಯಪುರದ ಇಂಡಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕರಕುಶಲ ವಿಭಾಗದ ಶಿಕ್ಷಕಿ ರೇಣುಕಾ ರವೀಂದ್ರ ಮುಂಜಣ್ಣಿ ಸೇರಿ 17 ಶಿಕ್ಷಕರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ನ್ಯಾಯಪೀಠ, ಅರ್ಜಿದಾರರನ್ನು ಸದ್ಯ ಕರ್ತವ್ಯದಿಂದ ಬಿಡುಗಡೆ ಮಾಡಬಾರದು ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿತು. ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕೆಆರ್‌ಇಐಎಸ್) ವಸತಿ ಶಾಲೆಗಳಲ್ಲಿ ಚಿತ್ರಕಲೆ ಮತ್ತು ಕರಕುಶಲ ಶಿಕ್ಷಕರಾಗಿ 2001-2002ರಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಅವರಿಗೆ ಪ್ರತಿವರ್ಷ ಶೇ. 5 ರಂತೆ ಗರಿಷ್ಠ 40ರವರೆಗೆ ಕೃಪಾಂಕ ನೀಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಿಸಿ ಅವರ ಸೇವೆ ಕಾಯಂಗೊಳಿಸಬೇಕು ಎಂದು ಹೈಕೋರ್ಟ್ 2012ರಲ್ಲಿ ಆದೇಶಿಸಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಜೊತೆಗೆ, ಕರ್ನಾಟಕ ಲೋಕ ಸೇವಾ ಆಯೋಗವು 2016ರ ನ. 3ರಂದು ಚಿತ್ರಕಲಾ ಮತ್ತು ಕರಕುಶಲ ಶಿಕ್ಷಕರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ಅದರಲ್ಲಿ ಗ್ರೂಪ್ ಸಿ ಹುದ್ದೆಯಲ್ಲಿ ಬರುವ ಚಿತ್ರಕಲೆ ಮತ್ತು ಕರಕುಶಲ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಿಸಿಲ್ಲ. ಕೃಪಾಂಕ ನೀಡಿಕೆ ಹಾಗೂ ವಯೋಮಿತಿ ಸಡಿಲಿಕೆಯ ಅವಕಾಶವನ್ನೂ ಕಲ್ಪಿಸಿಲ್ಲ. ಇದರಿಂದ ತಮ್ಮನ್ನು ಹುದ್ದೆಯಿಂದ ಕೈಬಿಡಬಹುದೆಂಬ ಆತಂಕ ಅರ್ಜಿದಾರ ಶಿಕ್ಷಕರಿಗೆ ಎದುರಾಗಿದೆ. ಆದ್ದರಿಂದ, ಅರ್ಜಿದಾರರನ್ನು ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡದಂತೆ ಸೇವೆಯಲ್ಲಿ ಮುಂದುವರಿಸಿಕೊಂಡು ಹೋಗಲು ಕೆಆರ್‌ಇಐಎಸ್‌ಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಇದನ್ನು ಓದಿ: ದೇವರಾಜ ಅರಸು ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್