ಬೆಂಗಳೂರು : ನನ್ನ ಕವಿತೆಗೆ ಅಲ್ಲಮನ ಮೆದುಳು ಬಸವಣ್ಣನ ಹೃದಯವಿರಲಿ. ನನ್ನ ಕವಿತೆಗೆ ಬುದ್ಧನ ಸ್ವಾಸ್ಥ್ಯ ಆನಂದದ ಸ್ನೇಹವಿರಲಿ ಎಂಬ ಪದ್ಯ ಬರೆದಿದ್ದ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಇದೀಗ ನನ್ನ ಕವಿತೆ ಎಂಬ ಪದ್ಯವನ್ನ ಕೈಬಿಡಿ ಎಂದು ಪತ್ರ ಬರೆದಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಸಾಹಿತಿಗಳ ಹೋರಾಟ ಮುಂದುವರೆದಿದೆ. ಇದರ ಸಾಲಿಗೆ ಮೂಡ್ನಾಕೂಡು ಚಿನ್ನಸ್ವಾಮಿಯವರು 5ನೇ ತರಗತಿ ಪಠ್ಯದಲ್ಲಿದ್ದ ತಮ್ಮ ಪದ್ಯಕ್ಕೆ ನೀಡಿದ್ದ ಅನುಮತಿ ವಾಪಸ್ ಪಡೆದಿದ್ದಾರೆ.
ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿರುವ ಅವರು, ಶಾಲಾ ಪಠ್ಯ ಕೇಸರೀಕರಣಗೊಳ್ಳುತ್ತಿದೆ. ಇದರಿಂದ ಸಾರಸ್ವತ ಲೋಕ ವಿಚಲಿತಗೊಂಡಿದೆ ಅಂತಾ ಆತಂಕ ಹೊರ ಹಾಕಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಮಿತಿಯನ್ನು ನೇಮಿಸಿ ಶಾಲಾ ಪಠ್ಯಗಳನ್ನು ಕೇಸರಿಕರಣಗೊಳಿಸುತ್ತಿರುವ ಬಗ್ಗೆ ಕನ್ನಡ ಸಾರಸ್ವತ ಲೋಕ ವಿಚಲಿತಗೊಂಡಿದೆ.
ಬಸವಣ್ಣನವರ ಕುರಿತು ತಪ್ಪು ಮಾಹಿತಿ ನೀಡುವುದು, ಕುವೆಂಪು ಅವರನ್ನ ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ. ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನ ಜಾತ್ಯಾತೀತಗೊಳಿಸಿದ್ರೆ ಮಾತ್ರ ಸರಿಪಡಿಸಲು ಸಾಧ್ಯ. ಸ್ವಾಸ್ಥ್ಯ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಶಿಕ್ಷಣಕ್ಷೇತ್ರ ಅನವಶ್ಯಕ ವಿದ್ಯಮಾನಗಳಿಂದ ದಾಳಿಗೊಳಗಾಗುತ್ತಿರುವುದು ವಿಷಾದನೀಯ.
ಪ್ರಗತಿಪರತೆಯ ಪ್ರತಿಪಾದಿಸುವವರನ್ನು ಎಡಪಂಥೀಯರು ಎಂದು ದೂರುವುದು ಹಾಗೂ ದೂರ ಮಾಡುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಈ ಹಿನ್ನೆಲೆಯಲ್ಲಿ 5ನೇ ತರಗತಿಗೆ ಪಠ್ಯವಾಗಿರುವ ನನ್ನ ಕವಿತೆಗೆ ಎಂಬ ಕವಿತೆಗಾಗಿ ನೀಡಿರುವ ನನ್ನ ಅನುಮತಿಯನ್ನ ಹಿಂಪಡೆಯುತ್ತಿದ್ದೇನೆ ಅಂತಾ ತಿಳಿಸಿದ್ದಾರೆ.
"ಹೀಗೊಂದು ಟಾಪ್ ಪ್ರಯಾಣ" ಎಂಬ ಲಲಿತ ಪ್ರಬಂಧ ಮುಂದುವರೆಸಬಾರದು - ಸಾಹಿತಿ ಈರಪ್ಪ ಎಂ. ಕಂಬಳಿ
ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕೈಮೀರಿ ಹೋಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಸಿಡಿದೆದ್ದಿರುವ ದೇವನೂರ ಮಹಾದೇವ, ಜಿ. ರಾಮಕೃಷ್ಣ, ಎಸ್.ಜಿ ಸಿದ್ದರಾಮಯ್ಯ ಹಾಗೂ ನಾಡೋಜ ಡಾ. ಹಂಪ ನಾಗರಾಜಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ ಬಳಿಕ ಇದೀಗ ಮತ್ತೊಬ್ಬ ಸಾಹಿತಿಯಿಂದ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ. ಸಚಿವ ನಾಗೇಶ್ ಅವರಿಗೆ ಸಾಹಿತಿ ಈರಪ್ಪ ಎಂ. ಕಂಬಳಿ ಪತ್ರ ಬರೆದಿದ್ದು, ಹತ್ತನೇ ತರಗತಿಯ ಪಠ್ಯದಲ್ಲಿರುವ ಲೇಖನ ಕೈಬಿಡುವಂತೆ ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಯನ್ನು ಕಂಡು ನನಗೆ ತೀವ್ರ ಅಸಮಾಧಾನವಾಗಿದೆ. ಆ ಕಾರಣಕ್ಕೆ ಕಳೆದ ಸಾಲಿನಲ್ಲಿ 10ನೇ ತರಗತಿಯ ನುಡಿ ಕನ್ನಡ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿರುವ "ಹೀಗೊಂದು ಟಾಪ್ ಪ್ರಯಾಣ" ಶೀರ್ಷಿಕೆಯ ನನ್ನ ಲಲಿತ ಪ್ರಬಂಧ ಮುಂದುವರೆಸಬಾರದು. ಈ ಹಿಂದೆ ನೀಡಿದ್ದ ಅನುಮತಿಯನ್ನ ವಾಪಸ್ ಪಡೆದಿದ್ದೇನೆ ಎಂದು ಸಾಹಿತಿ ಈರಣ್ಣ ಕಂಬಳಿ ಪತ್ರ ಬರೆದಿದ್ದಾರೆ.
ಓದಿ: ಬಸವಣ್ಣ ಕುರಿತ ತಿರುಚಿದ ಪಠ್ಯ ಸರಿಪಡಿಸದಿದ್ದರೆ ಹೋರಾಟ: ಶಿವಾಚಾರ್ಯ ಶ್ರೀ