ಬೆಂಗಳೂರು: ಜನರಿಗೆ ಹತ್ತಿರವಾಗಲು ಸಿಲಿಕಾನ್ ಸಿಟಿ ಪೊಲೀಸರು ಮುಂದಾಗಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಾರ್ವಜನಿಕರ ಸಮಸ್ಯೆ ಆಲಿಸಲು ತಿಂಗಳಿಗೆ ಒಂದು ದಿನ ಜನ ಸಂಪರ್ಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಪ್ರತಿ ತಿಂಗಳ 4ನೇ ಶನಿವಾರ “ಮಾಸಿಕ ಜನ ಸಂಪರ್ಕ ದಿನ” ನಡೆಯಲಿದೆ. ಸಾರ್ವಜನಿಕರು ನೇರವಾಗಿ ಪೊಲೀಸರನ್ನು ಭೇಟಿಯಾಗಿ, ಬಾಕಿ ಇರುವ ಪ್ರಕರಣಗಳ ಪ್ರಗತಿ, ದೂರುಗಳ ಪರಿಹಾರ ಸೇರಿದಂತೆ ಇತರೆ ಮಾಹಿತಿಗಳನ್ನೂ ಪಡೆಯಬಹುದು.
ಸಾರ್ವಜನಿಕರು ಪೊಲೀಸ್ ಆಯುಕ್ತರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಇನ್ಸ್ಪೆಕ್ಟರ್ಗಳನ್ನು ಭೇಟಿಯಾಗಬಹುದು. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪೊಲೀಸರನ್ನು ಭೇಟಿಯಾಗಲು ಅವಕಾಶ ಇದೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.