ಬೆಂಗಳೂರು: ಕೊರೊನಾ ಸೋಂಕಿನ ಸಂಕಷ್ಟದಿಂದ 3 ತಿಂಗಳು ಜನ್ ಧನ್ ಖಾತೆಗೆ ಕೇಂದ್ರ ಸರ್ಕಾರ ತಿಂಗಳಿಗೆ 500 ರೂಪಾಯಿ ಜಮಾ ಮಾಡುವುದಾಗಿ ತಿಳಿಸಿದೆ. ಆದರೆ ವಿವಿಧ ಕಾರಣಗಳಿಂದ ದೇಶದ ಶೇ.11ರಷ್ಟು ಖಾತೆದಾರರಿಗೆ ಹಣ ತಲುಪಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆಧಾರ್ಕಾರ್ಡ್ ಜೊತೆ ಲಿಂಕ್ ಆಗದೆ ಇರುವ ಖಾತೆಗಳಿಗೆ ಇನ್ನೂ 500 ರೂಪಾಯಿ ಬಂದಿಲ್ಲ, ಇದರಿಂದ ಕೆಲವರಿಗೆ ಮಾತ್ರ ಬಂದಿದ್ದು ಬರಬೇಕಾದ ಹಣಕ್ಕೆ ಬಡ ಜನ, ಅದರಲ್ಲಿ ಹೆಚ್ಚಿನ ಮಹಿಳೆಯರು ಕಾದು ಕುಳಿತಿದ್ದಾರೆ.
ಸದ್ಯಕ್ಕೆ ಯಾವುದೇ ಕೆಲಸವಿಲ್ಲದ ಈ ವರ್ಗದ ಜನ, ಮನೆಗೆಲಸ, ಕಟ್ಟಡ ನಿರ್ಮಾಣ ಹಾಗೂ ಇನ್ನಿತರೆ ಕೆಲಸಗಳು ನಿಂತಿರುವ ಕಾರಣ ಹಣವಿಲ್ಲದೆ ಸ್ವಂತ ಉರಿಗೂ ತೆರಳಲಾಗದೆ ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಆರ್ಥಿಕ ತಜ್ಞ ನಿತ್ಯಾನಂದ, ನಮ್ಮ ದೇಶದಲ್ಲಿ ಉತ್ತಮ ಯೋಜನೆಗಳು ಘೋಷಣೆಯಾಗುತ್ತದೆ. ಹಣವನ್ನೂ ಬಿಡುಗಡೆ ಮಾಡಲಾಗುತ್ತದೆ. ಆದರೆ ಆ ಹಣ ಫಲಾನುಭವಿಗಳಿಗೆ ಸೇರುವಲ್ಲಿ ಅಡತಡೆಗಳು ಹೆಚ್ಚಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗ ಕೊರೊನಾ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹೆಣ್ಣು ಮಕ್ಕಳಿಗೆ ತಿಂಗಳಿಗೆ 500 ರೂಪಾಯಿ ನೀಡುವುದಾಗಿ ಹೇಳಿದ್ದರು. ಆದರೆ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಈ ಹಣ ತಲುಪಿಲ್ಲ ಎಂದಿದ್ದಾರೆ.
ಹೆಚ್ಚಿನ ಜನ ಅನಕ್ಷರಸ್ಥರು, ಅವರಿಗೆ ಎಲ್ಲಿ ಹೋಗಿ ಹಣ ಪಡೆಯಬೇಕು ಹಾಗೂ ಹೇಗೆ ಪಡೆಯಬೇಕು ಎಂದು ತಿಳಿದಿಲ್ಲ. ಸದ್ಯದ ಮಾಹಿತಿ ಪ್ರಕಾರ ಉತ್ತರ ಕರ್ನಾಟಕದ ಹೆಚ್ಚು ಜನರಿಗೆ ಈ ಹಣ ಸೇರಿಲ್ಲ ಎನ್ನಲಾಗಿದೆ. ಮುಖ್ಯವಾಗಿ ಬಹುಪಾಲು ಖಾತೆಗಳು ಆಧಾರ್ ಜೊತೆ ಜೋಡಣೆ ಆಗದೆ ಇಎರುವುದು ಸಮಸ್ಯೆಯಾಗಿದೆ. ಅದಕ್ಕೆ ಸೂಕ್ತ ಮಾಹಿತಿ ನೀಡಿ ಆಧಾರ್ಕಾರ್ಡ್ ಜೊತೆ ಜೋಡಣೆ ಮಾಡಬೇಕು ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.