ಆನೇಕಲ್: ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಸಭಾಂಗಣದಲ್ಲಿ ಮೊದಲ ಬಾರಿಗೆ ಹತ್ತು ಶಾಲೆಗಳ ಸಾವಿರಾರು ಮಕ್ಕಳಿಗೆ ನಿರ್ದೇಶಕ ಪಿ ಶೇಷಾದ್ರಿ ಇನ್ನಿತರೆ ನಿರ್ಮಾಪಕರ ಮಿತ್ರ ಚಿತ್ರ ಬ್ಯಾನರ್ ಅಡಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿತ್ರ ಪ್ರದರ್ಶನ ನಡೆಸಿಕೊಟ್ಟಿದ್ದಾರೆ.
ಒಂದೂವರೆ ತಾಸಿನ ಸಿನಿಮಾದಲ್ಲಿ ಗಾಂಧಿ ಮಹಾತ್ಮ ಆಗುವ ಮುಂಚಿನ ಮೋಹನದಾಸ ಹೇಗಿದ್ದರು ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಕದ್ದು ಬೀಡಿ ಸೇದಿದ್ದು, ಮನೆಯಲ್ಲಿ ನಿಷೇಧವಾಗಿದ್ದ ಮಾಂಸಾಹಾರ ಸೇವಿಸಿದ್ದು, ಸಿನಿಮಾ ನೋಡಲು ದೇವರ ಹುಂಡಿಯಿಂದ ಕಾಸು ಕದ್ದಿದ್ದ ಪ್ರಸಂಗಗಳು ಪರದೆಯಲ್ಲಿ ಮೂಡಿಬರುವಾಗ ನೆರೆದಿದ್ದ ಮಕ್ಕಳು ಚಪ್ಪಾಳೆ, ಕೇಕೆ ಹಾಕಿದರು. ಮಾಡಿದ ತಪ್ಪಿನ ಪಶ್ಚಾತ್ತಾಪಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿ, ಆತ್ಮಹತ್ಯೆ ಮಹಾಪಾಪ ಎಂಬುದನ್ನು ಅರಿತು, ಪತ್ರ ಮುಖೇನ ತಂದೆಯ ಬಳಿ ತಪ್ಪನ್ನು ನಿವೇದಿಸಿಕೊಳ್ಳುವ ಪ್ರಸಂಗ ಎದುರಾದಾಗ ಸಭಾಂಗಣದಲ್ಲಿ ಮೌನ ಆವರಿಸಿತು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ದೀಪ ಬೆಳಗಿಸಿ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಸಿನಿಮಾವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನಕ್ಕೆ ಏರ್ಪಾಡು ಮಾಡುವ ಭರವಸೆಯ ಜತೆಗೆ ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರಿಗಾಗಿ ಚಿತ್ರ ಪ್ರದರ್ಶನ ಆಯೋಜಿಸುವುದಾಗಿಯೂ ಹೇಳಿದರು.
ಗಾಂಧಿ ಆತ್ಮಕಥೆ ಸತ್ಯಾನ್ವೇಷಣೆ ಹಾಗು ಬೋಳುವಾರರ ಬಾಪು ಗಾಂಧಿ – ಪಾಪು ಗಾಂಧಿ ಕೃತಿಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರ ನೈಜವಾಗಿ ಮೂಡಿಬರಲೆಂದು ರಾಜ್‌ಕೋಟ್‌ನ ಪೋರಬಂದರಿನಲ್ಲೇ ಚಿತ್ರೀಕರಣ ಮಾಡಲಾಗಿದೆ. ವಿಶೇಷವೆಂದರೆ ಸಹಕಾರಿ ನಿರ್ಮಾಪಕತ್ವದಡಿ 20 ಜನ ಇದಕ್ಕೆ ಬಂಡವಾಳ ಹೂಡಿದ್ದಾರೆ. ಏಳು ವರ್ಷದ ಗಾಂಧಿಯಾಗಿ ಮಾಸ್ಟರ್ ಪರಂಸ್ವಾಮಿ, 14 ವರ್ಷದ ಗಾಂಧಿಯಾಗಿ ಮಾಸ್ಟರ್ ಸಮರ್ಥ್ ಅಭಿನಯ ಗಮನ ಸೆಳೆಯುವಂತಿದೆ. ಈ ಸಿನಿಮಾವನ್ನು ನನ್ನ ವೃತ್ತಿ ಜೀವನದ ಅನುಭವದಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ತೋರಿಸಿರುವುದು ಸಂತೋಷ ನೀಡಿದೆ ಎಂದು ನಿರ್ದೇಶಕ ಪಿ.ಶೇಷಾದ್ರಿ ಖುಷಿ ಹಂಚಿಕೊಂಡರು.