ಬೆಂಗಳೂರು: ಕರ್ನಾಟಕದ ವಿಚಾರದಲ್ಲಿ ಸುಳ್ಳು ಹೇಳಿರುವ ಮೋದಿಯವರು ಜನರ ಬಳಿ ಕ್ಷಮೆ ಕೇಳಬೇಕು. ರಾಜ್ಯದ ಪಾಲಿನ ಅನುದಾನಗಳನ್ನು ನ್ಯಾಯಯುತವಾಗಿ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಸಂಬಂಧ ಇಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶದ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಬಿಜೆಪಿಯ ಚುನಾವಣಾ ಏಜೆಂಟರಾಗಿ ದುಡಿಯುತ್ತಿದ್ದಾರೆ. ನಮ್ಮ ರಾಜ್ಯದ ಜನರಿಂದ ದೋಚಿಕೊಂಡ ಸಂಪತ್ತನ್ನು ಪ್ರವಾಹ, ಬರ, ಕೋವಿಡ್ ನಂತಹ ಮಾರಕ ಕಾಯಿಲೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ, ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಬದಲು ಚುನಾವಣಾ ಪ್ರಚಾರಗಳಿಗೆ ಖರ್ಚು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸುತ್ತಲೇ ಇದ್ದೇನೆ ಎಂದು ಹೇಳಿದ್ದಾರೆ.
ಮೊನ್ನೆಯ ಬಜೆಟ್ ಭಾಷಣದಲ್ಲಿ ಮೋದಿ ಸರ್ಕಾರವು ನಮ್ಮ ರಾಜ್ಯದಿಂದ 4.75 ಲಕ್ಷ ಕೋಟಿಗಳಷ್ಟು ಸಂಪತ್ತನ್ನು ದೋಚಿಕೊಂಡು ಕೇವಲ 37ಸಾವಿರ ಕೋಟಿ ತೆರಿಗೆ ಪಾಲು ಕೊಡುತ್ತಿದೆ, ಇದು ಅನ್ಯಾಯವೆಂದು ಪ್ರತಿಭಟಿಸಿದ್ದೆ ಹಾಗೂ ಈ ಕುರಿತು ದಾಖಲೆಗಳನ್ನು ಒದಗಿಸಿದ್ದೆ. ಎಂದೂ ಉಸಿರೆ ಬಿಡದಿದ್ದ ಮೋದಿಯವರು ಇತ್ತೀಚೆಗೆ ನವದೆಹಲಿಯ ಕರ್ನಾಟಕ ಭವನದ ಅಮೃತ ಮಹೋತ್ಸಹ ಹಾಗೂ ಬಾರಿಸು ಕನ್ನಡ ಡಿಂಡಿಮವ ಎಂಬ ಕಾರ್ಯಕ್ರಮದಲ್ಲಿ ತಾವು ಕರ್ನಾಟಕದ ರೈಲ್ವೆಗೆ, ಹೆದ್ದಾರಿ ಯೋಜನೆಗಳಿಗೆ ಬಹಳ ಅನುದಾನಗಳನ್ನು ಕೊಟ್ಟಿದ್ದೇವೆ ಹಾಗೂ ಅನುದಾನಗಳನ್ನು ಹೆಚ್ಚಿಸಿದ್ದೇವೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕಿಂತ ಎಷ್ಟೋ ಪಾಲು ಹೆಚ್ಚು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ.
ಕೇಂದ್ರ ಸರ್ಕಾರವೆ ಅಧಿಕೃತವಾಗಿ ಪ್ರಕಟಿಸಿರುವ ದಾಖಲೆಗಳಂತೆ, 2005 ರಿಂದ 2014ರ ಮಾರ್ಚ್‍ವರೆಗೆ 9 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕರ್ನಾಟಕದಲ್ಲಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ಉದ್ದ 2334 ಕಿಮೀಗಳು. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ 2014 ರಿಂದ 2022 ರವರೆಗೆ ನಿರ್ಮಿಸಿದ ಒಟ್ಟು ರಾಷ್ಟ್ರೀಯ ಹೆದ್ದಾರಿ ಉದ್ದ ಕೇವಲ 1479 ಕಿ.ಮೀ ಮಾತ್ರ. ರೈಲ್ವೆ ವಿಚಾರಕ್ಕೆ ಬಂದರೆ ಮನಮೋಹನ್ ಸಿಂಗ್ ಸರ್ಕಾರವು ತನ್ನ 9 ವರ್ಷಗಳಲ್ಲಿ 301 ಕಿ.ಮೀ ರೈಲ್ವೆಯನ್ನು ನಿರ್ಮಿಸಿತ್ತು.
ಮೋದಿ ಸರ್ಕಾರ 291 ಕಿ.ಮೀ ಗಳಷ್ಟು ಮಾತ್ರ ನಿರ್ಮಿಸಿದೆ. ನಮ್ಮ ರಾಜ್ಯದಲ್ಲಿ ಸುಮಾರು 18 ರೈಲ್ವೆ ಯೋಜನೆಗಳು ಚಾಲ್ತಿಯಲ್ಲಿವೆ. ಇವುಗಳಿಗೆ 14-15 ಸಾವಿರ ಕೋಟಿ ಹಣ ಬೇಕು. ಈ ಯೋಜನೆಗಳಲ್ಲಿ ತುಮಕೂರು ರಾಯದುರ್ಗ, ತುಮಕೂರು- ದಾವಣಗೆರೆ ಮಾರ್ಗಗಳೂ ಸೇರಿವೆ. ಈ ಯೋಜನೆಗಳನ್ನು ಮನಮೋಹನಸಿಂಗರು ಪ್ರಧಾನಿಯಾಗಿದ್ದಾಗ ಕೊಟ್ಟ ಕೊಡುಗೆಗಳಾಗಿವೆ. ಈ ವರ್ಷ ಚುನಾವಣೆ ಬರುತ್ತಿರುವುದರಿಂದ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಣ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ನಮ್ಮಿಂದ ದೋಚುವ ತೆರಿಗೆ, ಮೇಲ್ತೆರಿಗೆಗಳಿಗೂ ಮತ್ತು ನಮಗೆ ಹಂಚಿಕೆ ಮಾಡುತ್ತಿರುವ ಅನುದಾನಗಳಿಗೂ ಸಂಬಂಧವೆ ಇಲ್ಲ. 2013-14ರಲ್ಲಿ ಕೇಂದ್ರದ ಬಜೆಟ್ ಗಾತ್ರ 16.65 ಲಕ್ಷ ಕೋಟಿ ರೂ ಇತ್ತು. ಆಗ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿ ಒಟ್ಟು 30,310 ಕೋಟಿಗಳಷ್ಟು ಅನುದಾನಗಳು ಬಂದಿದ್ದವು.
2023-24ರಲ್ಲಿ ಕೇಂದ್ರದ ಬಜೆಟ್ ಗಾತ್ರ 45.01 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆದರೆ ರಾಜ್ಯಕ್ಕೆ ಬರಬಹುದೆಂದು ಅಂದಾಜು ಮಾಡಿರುವುದು 49 ಸಾವಿರ ಕೋಟಿ ಮಾತ್ರ. ಬಜೆಟ್ ಗಾತ್ರ ಸುಮಾರು 3 ಪಟ್ಟು ಹೆಚ್ಚಾಗಿದೆ. ಅದರ ಲೆಕ್ಕದಲ್ಲಿ ನೋಡಿದರೂ ನಮ್ಮ ರಾಜ್ಯದ 85-90 ಸಾವಿರ ಕೋಟಿ ಇರಬೇಕಿತ್ತಲ್ಲವೆ ಮೋದೀಜಿಯವರೆ? ಸತ್ಯ ಇಷ್ಟು ಸ್ಪಷ್ಟವಾಗಿರುವಾಗ ಯಾಕೆ ಸುಳ್ಳು ಹೇಳಿ ಕರ್ನಾಟಕದ ಮರ್ಯಾದಸ್ಥ ಜನರ ಕಿವಿಯ ಮೇಲೆ ಹೂಗಳನ್ನಿಡಲು ಪ್ರಯತ್ನಿಸುತ್ತೀರಿ? ಎಂದು ಪ್ರಶ್ನಿಸಿದರು.
ಮೊದಲು ನಮ್ಮ ರಾಜ್ಯವೆ ತೆರಿಗೆ ಸಂಗ್ರಹಿಸಿ ನಾವೆ ಖರ್ಚು ಮಾಡುತ್ತಿದ್ದೆವು. ಈಗ ಜಿಎಸ್‍ಟಿ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ಆದರೂ ನಮಗೆ ಸಮರ್ಪಕ ಪಾಲು ಕೊಡದೆ ದ್ರೋಹ ಮಾಡಲಾಗುತ್ತಿದೆ. 1.3ಲಕ್ಷ ಕೋಟಿ ಜಿಎಸ್‍ಟಿ ಮತ್ತು ನೇರ ತೆರಿಗೆ ಸಂಗ್ರಹಿಸುವ ಉತ್ತರಪ್ರದೇಶಕ್ಕೆ 1.83 ಲಕ್ಷ ಕೋಟಿ ತೆರಿಗೆ ಪಾಲು ಕೊಡಲಾಗುತ್ತಿದೆ. 3.72 ಲಕ್ಷ ಕೋಟಿ ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಕೇವಲ 37 ಸಾವಿರ ಕೋಟಿ ಪಾಲು ಕೊಡುತ್ತೇವೆ ಎನ್ನುತ್ತೀರಿ.
ಹಸು ಹಾಲು ಕೊಡುತ್ತದೆಂದು ಕೆಚ್ಚಲು ಕೊಯ್ದು ರಕ್ತ ಹೀರುವ ರಾಕ್ಷಸ ಕೆಲಸವನ್ನು ಕರ್ನಾಟಕದ ಕುರಿತು ಮಾಡುತ್ತಿದ್ದೀರಿ. ನಿಮ್ಮ 9 ವರ್ಷಗಳ ಆಡಳಿತದಲ್ಲಿ ಗುಜರಾತ್‍ನಲ್ಲಿ 3191 ಕಿಮೀ, ಉತ್ತರಪ್ರದೇಶದಲ್ಲಿ 4259 ಕಿಮೀ, ಮಹಾರಾಷ್ಟ್ರದಲ್ಲಿ 12069 ಕಿ.ಮೀ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ನಿರ್ಮಿಸಿದ್ದೆಷ್ಟು? 1479 ಕಿ.ಮೀ ಮಾತ್ರ. ಇಷ್ಟು ಅನ್ಯಾಯ ಮಾಡಿದರೂ ಕರ್ನಾಟಕಕ್ಕೆ ಕಿರೀಟ ತೊಡಿಸಿದ್ದೇವೆ ಎಂದು ಸುಳ್ಳು ಹೇಳುವುದು ನಿಮ್ಮ ಹುದ್ದೆಗೆ ಶೋಭೆ ತರುವುದೆ ಮೋದೀಜಿಯವರೆ? ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವ ಧೈರ್ಯ ಮಾಡಿಲ್ಲ ನೀವು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಸ್ತೆ, ರೈಲ್ವೆ ಹಾಗೂ ತೆರಿಗೆ ಪಾಲಿನ ಕುರಿತು ಮಾತ್ರ ಮಾತನಾಡಿದ್ದೀರಿ. ಕರ್ನಾಟಕದ ಈರುಳ್ಳಿ, ಅರಿಶಿನ, ತೆಂಗು, ಅಡಕೆ, ಮೆಣಸು, ತೊಗರಿ, ಭತ್ತ, ರಾಗಿ, ಜೋಳ ಮುಂತಾದ ಬೆಳೆಗಳನ್ನು ಬೆಳೆಯುವ ರೈತರು ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಕೂಡಲೆ ಇವರ ಸಂಕಷ್ಟ ಪರಿಹರಿಸಲು ಸೂಕ್ತ ಪರಿಹಾರದ ಪ್ಯಾಕೇಜನ್ನು ಘೋಷಿಸಿ. ಹಾಗೆಯೆ ಕರ್ನಾಟಕದ ರಸ್ತೆಗಳ ಟೋಲ್‍ಗಳಲ್ಲಿ ದರಗಳು ಕೆಲವೇ ದಿನಗಳಲ್ಲಿ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗಿವೆ. ಅವುಗಳನ್ನು ಕೂಡಲೇ ರದ್ದು ಮಾಡಬೇಕು. ಸರ್ಕಾರದ ಭ್ರಷ್ಟಾಚಾರ ತೀವ್ರವಾಗುತ್ತಲೆ ಇದೆ. ಅದರ ಕುರಿತು ಸೂಕ್ತ ತನಿಖೆಗೆ ವಹಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಹೇಳಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಪುನಾರಂಭ