ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯ ಲೋಕಾರ್ಪಣೆಗೆ ಪೂರ್ವಭಾವಿಯಾಗಿ ಇಂದು ಉದ್ಘಾಟನಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡರು ಆಧುನಿಕ ನಾಗರಿಕತೆಯ ನಿರ್ಮಾಪಕರು ಎಂದು ಬಣ್ಣಿಸಿದರು.
ಉದ್ಘಾಟನಾ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಂಪೇಗೌಡರು ನಾಡಪ್ರಭು ಹೇಗಾದ್ರು ಅನ್ನೋದೆ ರೋಚಕವಾದ ಕಥೆ. ಪಾಳೇಗಾರನ ಕರ್ತವ್ಯ ಕೇವಲ ಕಂದಾಯ ವಸೂಲಿ ಮಾಡಿಕೊಡುವುದಷ್ಟೇ ಅಲ್ಲ.. ಬದುಕನ್ನು ಸೃಷ್ಟಿ ಮಾಡಿಕೊಡುವ ಸಲುವಾಗಿ ತಮ್ಮ ವ್ಯಾಪ್ತಿಯಲ್ಲಿ ಕೆರೆಕುಂಟೆ ಮತ್ತು ದೇವಸ್ಥಾನಗಳ ನಿರ್ಮಾಣ ಮಾಡಿ ಜನರಿಗೆ ಸುಖ ಶಾಂತಿ ತಂದುಕೊಟ್ಟರು. ಸಾಮಾನ್ಯವಾಗಿ ನದಿಗಳ ಪಕ್ಕದಲ್ಲಿ ನಗರಗಳು ನಿರ್ಮಾಣವಾಗುತ್ತವೆ. ಆದರೆ ಕೆಂಪೇಗೌಡರ ದೂರದೃಷ್ಠಿಯೇ ಬೇರೆಯಾಗಿತ್ತು. ಅತಿ ಎತ್ತರದ ಪ್ರದೇಶ, ಕೆರೆಗುಂಟೆಗಳಿಂದ ಆವೃತವಾಗಿರುವ ಫಲವತ್ತಾದ ಭೂಮಿಯಲ್ಲಿ ನಗರ ನಿರ್ಮಾಣಕ್ಕೆ ಮುಂದಾದ್ರು. ಅದರ ಫಲವಾಗಿಯೇ ಬೆಂಗಳೂರು ನಗರ ನಿರ್ಮಾಣವಾಗಿದೆ ಎಂದರು.
ದೇವನಹಳ್ಳಿಯಿಂದ ಮಾಗಡಿವರೆಗೂ ಅವರು ಮಾಡಿರುವ ಕೆಲಸಗಳು ಸಾಕ್ಷಿಯಾಗಿ ನಿಂತಿವೆ. ನಗರ ಕಟ್ಟಬೇಕೆಂಬ ಆಸೆ ಆ ಕಾಲದ ನಾಯಕರಿಗೆ ಇರಲಿಲ್ಲ. ಮುಂದಿನ ಪೀಳಿಗೆಗೆ ಎಲ್ಲಾ ಸೌಕರ್ಯಗಳು ಸಿಗುವಂತೆ ನಾಗರಿಕತೆ ಕಟ್ಟಬೇಕೆಂಬ ದೂರದೃಷ್ಠಿ ಅವರಿಗೆ ಇತ್ತು. ನಾಲ್ಕು ದಿಕ್ಕಿಗೆ ಗೋಪುರ ಕಟ್ಟಿ ನಡುವೆ ನಗರ ಕಟ್ಟಿ, ನಗರದಲ್ಲಿ ಪೇಟೆಗಳನ್ನು ಕಟ್ಟಿದರು. ಕುಲಕಸುಬುಗೊಂದು ಪೇಟೆಗಳನ್ನು ಕಟ್ಟಿ ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಕಾರಣರಾದರು. ಆದರೆ ಅವರು ಸ್ವತಃ ಒಕ್ಕಲಿಗರಾದ್ರು ಒಕ್ಕಲಿಗರ ಪೇಟೆಯನ್ನು ಕಟ್ಟಲಿಲ್ಲ ಎಂದರು.
ಆಧುನಿಕ ನಾಗರಿಕತೆಯ ನಿರ್ಮಾಪಕರು ಕೆಂಪೇಗೌಡರು. ಕೇವಲ ವಸ್ತುಗಳು ಮತ್ತು ಕಟ್ಟಡಗಳಿಂದ ನಿರ್ಮಾಣವಾದ ನಗರವಲ್ಲ. ಅದರೊಳಗೆ ಸಂಸ್ಕೃತಿ, ವಿದ್ಯೆ, ಸುಖ ಶಾಂತಿ ಸಂವೃದ್ಧಿಯನ್ನ ತಂದವರು ಕೆಂಪೇಗೌಡರು. ಅವರ ನೆನಪಿಗಾಗಿ ನಾವು ಏನೇ ಮಾಡಿದ್ರು ಕಡಿಮೆಯೇ. ಕೆಂಪೇಗೌಡರನ್ನು ನಾವು ಯಾಕೆ ನೆನೆಯಬೇಕಂದ್ರೆ, ಇವತ್ತಿನ ಪೀಳಿಗೆಯ ಯವಕರಿಗೆ, ಆಡಳಿತಗಾರರಿಗೆ ಮತ್ತು ಅಧಿಕಾರಿಗಳಿಗೆ ಪ್ರೇರಣೆಯಾಗಿದ್ದಾರೆ. ಬೆಂಗಳೂರು ಇತಿಹಾಸ ಬಂದಾಗ ಅಗ್ರನಾಯಕರಲ್ಲಿ ಕೆಂಪೇಗೌಡರು ಬರ್ತಾರೆ ಎಂದು ಸಿಎಂ ತಿಳಿಸಿದರು.
ಕೆಂಪೇಗೌಡರ ಪ್ರತಿಮೆಯನ್ನು ಪ್ರಗತಿಯ ಪ್ರತಿಮೆ ಎಂದು ನಾಮಕರಣ ಮಾಡಲಾಗುವುದು. ಇಂದಿನಿಂದ 45 ದಿನಗಳ ಕಾಲ ಉದ್ಘಾಟನಾ ಅಭಿಯಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೆಂಪೇಗೌಡ ಕಂಚಿನ ಪ್ರತಿಮೆ ಅನಾವರಣ ಮಾಡುವುದಾಗಿ ಹೇಳಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್, ಆರ್. ಅಶೋಕ್, ಡಾ. ಕೆ.ಸುಧಾಕರ್, ಎಸ್.ಟಿ ಸೋಮಶೇಖರ್, ಮುನಿರತ್ನ, ಸಂಸದ ಡಿ.ವಿ. ಸದಾನಂದಗೌಡ, ಜಗ್ಗೇಶ್, ಬಿ.ಡಿ.ಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಓದಿ: ಕೆ.ಆರ್.ಪುರದಲ್ಲಿ 50 ಲಕ್ಷ ವೆಚ್ಚದಲ್ಲಿ ಕಂಚಿನ ಕೆಂಪೇಗೌಡ ಪ್ರತಿಮೆ ನಿರ್ಮಾಣ : ಬೈರತಿ ಬಸವರಾಜ್