ಬೆಂಗಳೂರು : ಕೋವಿಡ್ ಹಿನ್ನೆಲೆ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಎರಡು ದಿನಗಳ ಮಟ್ಟಿಗೆ ಅತ್ಯಂತ ಸರಳೀಕರಣಗೊಳಿಸಿ ನಡೆಸಲಾಗುತ್ತಿದೆ. ಜುಲೈ ಕೊನೆಯ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಆದರೆ, ಇನ್ನೂ ದಿನಾಂಕವನ್ನು ಘೋಷಣೆ ಮಾಡಿಲ್ಲ. ಸದ್ಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಪರೀಕ್ಷಾ ಮಂಡಳಿಯ ವೆಬ್ಸೈಟ್ www.sslc.Karnataka.gov.inನಲ್ಲಿ ಪ್ರಕಟವಾಗಿದೆ. ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಪ್ರಕಟವಾಗಿದೆ. ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆ ಪತ್ರಿಕೆ ಇದಾಗಿದ್ದು, ಮೂರು ಗಂಟೆಗಳ ಕಾಲ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹು ಆಯ್ಕೆಯಾಗಿದ್ದು, ಉತ್ತರಗಳನ್ನು ಒಎಂಆರ್( OMR) ಶೀಟ್ನಲ್ಲಿ ನಮೂದಿಸಬೇಕು. ಒಎಂಆರ್ ಶೀಟ್ ಮಾದರಿಯೂ ಪ್ರಕಟವಾಗಿದ್ದು, ಇನ್ನೆರಡು ದಿನದಲ್ಲಿ ಮಾತೃಭಾಷೆ ಸೇರಿ ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಪ್ರಕಟವಾಗಲಿದೆ.
ಪ್ರಶ್ನೆಪತ್ರಿಕೆ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿ ಅಭ್ಯಾಸ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ. ಶಿಕ್ಷಕರಿಗೂ ಈ ಕುರಿತು ಕಾರ್ಯ ಪ್ರವೃತ್ತರಾಗುವಂತೆ ಸೂಚನೆ ನೀಡಿರುವ ಅವರು, ವಿದ್ಯಾರ್ಥಿಗಳ ಗೊಂದಲವನ್ನು ನಿವಾರಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಜುಲೈ ಕೊನೆ ವಾರ ಎಸ್ಎಸ್ಎಲ್ಸಿ ಪರೀಕ್ಷೆ.. ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ