ಬೆಂಗಳೂರು : ಕೊರೊನಾ ವಾರಿಯರ್ಗಳಿಗೆ ವೇತನ ಲಭಿಸುವಂತೆ ಮಾಡುವಲ್ಲಿ ಶ್ರಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ವಿಧಾನಪರಿಷತ್ ಸದಸ್ಯ ರಘು ಆಚಾರ್ ಅಭಿನಂದಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಪತ್ರ ಬರೆದು ಅಭಿನಂದನೆ ತಿಳಿಸಿರುವ ರಘು ಆಚಾರ್, ತಮ್ಮ ಪರ ಕೊರೊನಾ ನಿಯಂತ್ರಣಕ್ಕಾಗಿ ಹೋರಾಟ ನಡೆಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಕೋವಿಡ್ ಸೇನಾನಿಗಳಿಗೆ ಸಂಬಳ ನೀಡುವಂತೆ ಒತ್ತಾಯಿಸಿದಕ್ಕಾಗಿ, ಈಗ ಸರ್ಕಾರ ವೇತನ ಬಿಡುಗಡೆ ಮಾಡಿರುವ ಸಂದರ್ಭದಲ್ಲಿ ಧನ್ಯವಾದ ತಿಳಿಸಿದ್ದಾರೆ.
ಪ್ರತಿಭಟನೆ ನಡೆಸಿದ್ದರು : ಕೊರೊನಾ ವಾರಿಯರ್ಸ್ಗೆ ಕೂಡಲೇ ವೇತನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ವಿಧಾನಸೌಧ ಹಾಗೂ ವಿಕಾಸಸೌಧ ಮಧ್ಯೆ ಇರುವ ಗಾಂಧಿ ಪ್ರತಿಮೆ ಮುಂಭಾಗ ಧರಣಿ ನಡೆಸಿದ್ದ ಪರಿಷತ್ ಸದಸ್ಯ ರಘು ಆಚಾರ್, ಇದಾದ ಬಳಿಕ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಸಲ್ಲಿಸಿದ್ದರು.
ಪತ್ರದಲ್ಲಿ ಅವರು, ರಾಜ್ಯದಲ್ಲಿ ಕೋವಿಡ್- 19 ರೋಗ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಹಗಲಿರುಳು ಹೋರಾಟ ನಡೆಸುತ್ತಿರುವ ಕೋವಿಡ್ ವಾರಿಯರ್ಗಳಿಗೆ ಇನ್ನೂ ಸಂಬಳ ಬಿಡುಗಡೆ ಮಾಡದಿರುವುದು ವಿಷಾಧನೀಯ. ನನ್ನ ಮತಕ್ಷೇತ್ರ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಕರ್ನಾಟಕದ ರಾಜ್ಯಾದ್ಯಂತ ಕೋವಿಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಗುತ್ತಿಗೆ ನೌಕರರಿಗೆ ಕೂಡಲೇ ಸಂಬಳ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಕೋರುತ್ತಿದ್ದೇನೆ ಎಂದಿದ್ದರು. ಇವರ ಪರ ಸರ್ಕಾರಕ್ಕೆ ಒತ್ತಡ ತಂದು ವೇತನ ಬಿಡುಗಡೆ ಮಾಡಿಸುವಲ್ಲಿ ಸಹಕರಿಸಿದ ಶಿವಕುಮಾರ್ ಅವರಿಗೆ ಪತ್ರದ ಮೂಲಕ ರಘು ಆಚಾರ್ ಧನ್ಯವಾದ ತಿಳಿಸಿದ್ದಾರೆ.