ಬೆಂಗಳೂರು : ಕೊರೊನಾ ವಾರಿಯರ್ಸ್ಗೆ ಕೂಡಲೇ ವೇತನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಧರಣಿ ನಡೆಸಿದ ವಿಧಾನ ಪರಿಷತ್ ಸದಸ್ಯ ರಘು ಆಚಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪತ್ರದಲ್ಲಿ ಅವರು, ರಾಜ್ಯದಲ್ಲಿ ಕೋವಿಡ್ 19 ರೋಗ ಹರಡುತ್ತಿದೆ. ಇದರ ನಿಯಂತ್ರಣಕ್ಕಾಗಿ ಹಗಲಿರುಳು ಹೋರಾಟ ನಡೆಸುತ್ತಿರುವ ಕೋವಿಡ್ ವಾರಿಯರ್ಸ್ಗೆ ಇನ್ನೂ ಸಂಬಳ ಬಿಡುಗಡೆ ಮಾಡದಿರುವುದು ವಿಷಾದನೀಯ.
ನನ್ನ ಮತ ಕ್ಷೇತ್ರ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಕೋವಿಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಗುತ್ತಿಗೆ ನೌಕರರಿಗೆ ಕೂಡಲೇ ಸಂಬಳ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಕೋರುತ್ತಿದ್ದೇನೆ ಎಂದಿದ್ದಾರೆ.
ತಮಗೆ ಆ.19ರಂದು ಪತ್ರ ಬರೆದಿದ್ದೆ. ಅದಕ್ಕೆ ಸ್ಪಂದಿಸಿದ ತಾವು, ಅಂದೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸರ್ಕಾರದ ಗಮನ ಸೆಳೆದಿರುವುದಕ್ಕೆ ನಿಮಗೆ ಅಭಿನಂದನೆಗಳು. ಇದಾಗಿ 15-20 ದಿನಗಳು ಕಳೆದರೂ ಇಂದಿಗೂ ಕೂಡ ರಾಜ್ಯಾದ್ಯಂತ ಕೋವಿಡ್ ಆಸ್ಪತ್ರೆಗಳ ಗುತ್ತಿಗೆ ನೌಕರರಿಗೆ ಸಂಬಳ ನೀಡಿಕೆ ಆಗಿಲ್ಲ. ಇದರಿಂದ ಮನನೊಂದ ನಾನು ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಎರಡು ಗಂಟೆ ಸಾಂಕೇತಿಕ ಧರಣಿ ನಡೆಸಿ ಸರ್ಕಾರದ ನಿರ್ಲಕ್ಷ್ಯ ಕ್ರಮವನ್ನು ಖಂಡಿಸಿದ್ದೇನೆ ಎಂದು ವಿವರಿಸಿದ್ದಾರೆ.
ಆದಾಗ್ಯೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ನಡೆಯುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಅಧಿವೇಶನ ನಡೆಯುವ ವೇಳೆ ಸದನದ ಬಾವಿಯೊಳಗೆ ಇಳಿದು ಧರಣಿ ನಡೆಸುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ನಿಮಗೆ ಮಾಹಿತಿ ನೀಡುತ್ತಾ, ಅದಕ್ಕೆ ನನಗೆ ಬೆಂಬಲಿಸುವಂತೆ ತಮಗೆ ಈ ಮೂಲಕ ಕೋರುತ್ತೇನೆ ಎಂದಿದ್ದಾರೆ.
ಈ ಬಾರಿಯ ತಮ್ಮ ಬೇಡಿಕೆಯನ್ನು ಕೂಡ ಸಿಎಂ ಗಮನಕ್ಕೆ ತರುತ್ತೇನೆ. ಕಲಾಪದಲ್ಲಿ ಧರಣಿ ನಡೆಸುವ ವಿಚಾರ ಮುಂದೆ ತೀರ್ಮಾನಿಸೋಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ.