ಬೆಂಗಳೂರು : ಮೀಸಲಾತಿ ಯಾರಿಗೆ, ಯಾಕೆ ಕೊಟ್ಟಿರಿ ಎಂದು ಕೇಳುತ್ತಿಲ್ಲ. ಮೀಸಲಾತಿ ಕೊಡಿ ಸಂತೋಷ. ಆದರೆ, ಇದರಿಂದ ಹಿಂದುಳಿದ ವರ್ಗಕ್ಕೆ ಹೊಡೆತ ಬೀಳುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್ ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಈಗ ಸರ್ಕಾರ ಘೋಷಣೆ ಮಾಡಿದೆ. ಆದರೆ, ಇದು ಜಾರಿಗೆ ಬರಲು ಕಷ್ಟ ಇದೆ. ಅದು ಅಧಿವೇಶನಕ್ಕೆ ಬರಬೇಕು, ನಂತರ ಶೆಡ್ಯೂಲ್ 9ಗೆ ತರಬೇಕು. ಮೀಸಲಾತಿ ಬಗ್ಗೆ ರಾಜ್ಯಾದ್ಯಂತ ಅಮೂಲಾಗ್ರ ಚರ್ಚೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮೀಸಲಾತಿ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು : ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಬೇಡಿಕೆ ಇತ್ತು. ಪ್ರಸನ್ನಾನಂದ ಸ್ವಾಮೀಜಿ ಕೂಡ 241 ದಿನ ಹೋರಾಟ ಮಾಡಿದ್ದರು. ಅನೇಕ ಜನಾಂಗ ಮೀಸಲಾತಿ ಅನುಭವಿಸುತ್ತಿವೆ. ಎಲ್ಲಾ ಜನಾಂಗದವರು ನಮಗೆ ಮೀಸಲಾತಿ ಬೇಕು ಎನ್ನುತ್ತಾರೆ. ಕೇಳೋದು ಎಲ್ಲರ ಹಕ್ಕು, ಆದರೆ ಕೊಡುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.
ಮೀಸಲಾತಿ ಕೊಟ್ಟ ದೇವೇಗೌಡರ ಹೆಸರು ಯಾಕೆ ಹೇಳುತ್ತಿಲ್ಲ : ಮಾಜಿ ಸಿಎಂ ದಿ. ದೇವರಾಜ್ ಅರಸು ಅವರು ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಇತರರಿಗೂ ಮೀಸಲಾತಿ ಒದಗಿಸಿಕೊಟ್ಟರು. ಹೆಚ್.ಡಿ. ದೇವೇಗೌಡರು ಕೂಡ ಮೀಸಲಾತಿ ಕೊಟ್ಟರು. ಅವರ ಹೆಸರನ್ನು ಯಾಕೆ ಹೇಳುತ್ತಿಲ್ಲ. ಇಂದು ಅನೇಕ ಜನಾಂಗದವರು ಸಚಿವರಾಗಲು ದೇವೇಗೌಡರೇ ಕಾರಣ. ದೇವೇಗೌಡರು ಮಾಡಿದ ಸಹಾಯ ಮರೆತುಬಿಟ್ರೇನಪ್ಪ ಎಂದು ಕೆಲ ಸಚಿವರಿಗೆ ಪರೋಕ್ಷವಾಗಿ ಕುಟುಕಿದರು.
ಬಿ.ಆರ್. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಯಾರಿಗೆ ಮೀಸಲಾತಿ ಸಿಗಬೇಕು ಎನ್ನುವ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ನಾಗೇಶ್