ಬೆಂಗಳೂರು: ಸ್ಪೀಕರ್ ವಿಧಾನಸೌಧಕ್ಕೆ ಆಗಮಿಸಿದ್ದು, ರಾಜೀನಾಮೆ ನೀಡಿದ ಅತೃಪ್ತ ಶಾಸಕರ ರಾಜೀನಾಮೆ ಪತ್ರದ ಪರಿಶೀಲನೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
ಈಗಾಗಲೇ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಸೇರಿದಂತೆ ಸ್ಪೀಕರ್ ಕಚೇರಿ ಅಧಿಕಾರಿಗಳು ಕಡತಗಳನ್ನು ಸಿದ್ಧವಾಗಿಸಿದ್ದು, ರಾಜೀನಾಮೆ ಪತ್ರದ ಪರಿಶೀಲನೆ ನಡೆಯುತ್ತಿದೆ. ಸ್ಪೀಕರ್ ಮೊದಲಿಗೆ 13 ಶಾಸಕರ ರಾಜೀನಾಮೆ ಪತ್ರದ ಪರಿಶೀಲನೆ ನಡೆಸಿ, ಬಳಿಕ ಮುಂದಿನ ಕಾರ್ಯವಿಧಾನವನ್ನು ಅನುಸರಿಸಲಿದ್ದಾರೆ.
ಇನ್ನು ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಹಲವು ದೂರುಗಳು ಸಹ ಬಂದಿವೆ. ಈ ಎಲ್ಲಾ ದೂರುಗಳ ಕಡತಗಳನ್ನು ಸ್ಪೀಕರ್ ಪರಿಶೀಲಿಸುತ್ತಿದ್ದಾರೆ. ಉಮೇಶ್ ಜಾಧವ್ ಮಾದರಿಯಲ್ಲೇ ಸಾರ್ವಜನಿಕ ಅಹವಾಲು ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ. ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿದ್ದ ಸ್ಪೀಕರ್ ಇಂದು ವಿಧಾನಸೌಧದ ತಮ್ಮ ಕಚೇರಿಗೆ ಆಗಮಿಸಿದ್ದಾರೆ.
ಜತೆಗೆ ಕಾಂಗ್ರೆಸ್ನ ಇನ್ನೂ ಕೆಲ ಶಾಸಕರು ಇಂದು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಶಾಸಕರನ್ನು ವೈಯಕ್ತಿಕವಾಗಿ ಕರೆದು ಮಾತನಾಡಿಸದೇ ಅವರ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ ಎಂದು ಇದೇ ವೇಳೆ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಶನಿವಾರ 13 ಶಾಸಕರು ನಮ್ಮ ಕಚೇರಿಗೆ ಬರುವ ಮೊದಲು ನನ್ನ ಪೂರ್ವಾನುಮತಿ ಪಡೆದಿರಲಿಲ್ಲ. ಅವರು ರಾಜೀನಾಮೆ ಸಲ್ಲಿಸಲು ಬರುವ ವಿಷಯವೇ ಗೊತ್ತಿರಲಿಲ್ಲ. ಹಾಗಾಗಿ ನಾನು ಕಚೇರಿಯಿಂದ ವೈಯಕ್ತಿಕ ಕೆಲಸಗಳಿಗೆ ತೆರಳಿದ್ದೆ. ನನ್ನ ಅನುಪಸ್ಥಿತಿಯಲ್ಲಿ ಅವರು ಬಂದು ರಾಜೀನಾಮೆ ಸಲ್ಲಿಸಿದ್ದರೆ ಅದಕ್ಕೆ ನಾನು ಹೊಣೆಯಲ್ಲ. ನಾನು ನಿಯಮಾವಳಿಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ ಎಂದು ಕಚೇರಿಯೊಳಗೆ ತೆರಳುವ ಮುನ್ನ ಸ್ಪೀಕರ್ ಸ್ಪಷ್ಟಪಡಿಸಿದರು.
ಇಂದು ಅವರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸುತ್ತೇನೆ. ನಂತರ ಕಾನೂನು ನಿಯಮಾವಳಿಗಳ ಪ್ರಕಾರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ರಮೇಶ್ಕುಮಾರ್ ತಿಳಿಸಿದರು.