ಬೆಂಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಮೊದಲ ಕಂತು ನೀಡಲಾಗಿದ್ದು, ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದ್ದಂತೆ ಎರಡನೇ ಕಂತು ಬಿಡುಗಡೆ ಮಾಡುವುದಾಗಿ ವಿಧಾನ ಪರಿಷತ್ನಲ್ಲಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್ನ ಬೆಳಗಿನ ಕಲಾಪದಲ್ಲಿ ಆರ್ಥಿಕ ಬಿಲ್ಗಳ ಮೇಲಿನ ಚರ್ಚೆಯ ವೇಳೆ ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ವಿಷಯವನ್ನು ಪ್ರತಿ ಪಕ್ಷಗಳ ಸದಸ್ಯರು ಪ್ರಸ್ತಾಪಿಸಿದರು.
ನಾವು ಶಿಫಾರಸು ಮಾಡಿದ್ದ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದ ಕ್ಷೇತ್ರದಲ್ಲಿ ನಾವು ತಲೆ ಎತ್ತಿ ಓಡಾಡದಂತಾಗಿದೆ. ನಿತ್ಯ ಜನರು ನಮ್ಮ ಮನೆಗಳ ಮುಂದೆ ಬಂದು ಕೇಳುತ್ತಿದ್ದಾರೆ. ಜನರಿಗೆ ನಾವು ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಕಳೆದ 10 ವರ್ಷಗಳಿಂದ ಅನುದಾನಕ್ಕನುಗುಣವಾಗಿ ನಾವು ಶಿಫಾರಸು ಮಾಡುತ್ತಿದ್ದೆವು. ಆದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ಒಂದು ವರ್ಷದ ಪೂರ್ತಿ ಕ್ರಿಯಾ ಯೋಜನೆ ಪಟ್ಟಿ ಕೊಡಿ ಎನ್ನುತ್ತಿದ್ದಾರೆ. ಅದರಂತೆ ನಾವು ತರಿಸಿ ಕೊಟ್ಟಿದ್ದೇವೆ. ಆದರೆ, ಹಣವೇ ಬಿಡುಗಡೆ ಆಗಿಲ್ಲ. ಈಗ ಅವರಿಗೆಲ್ಲ ನಾವು ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕಳೆದ ವರ್ಷ ಮತ್ತು ಈ ವರ್ಷ ಶಾಸಕರ ಅನುದಾನ ಹಣ ಬಿಡುಗಡೆಯಲ್ಲಿ ವ್ಯತ್ಯಯವಾಗಿದೆ. ಕೂಡಲೇ ಹಣವನ್ನು ಬಿಡುಗಡೆ ಮಾಡಲು ಸೂಚನೆ ನೀಡಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇರುವ ಹಣವನ್ನು ವಾಪಸ್ ಪಡೆದಿಲ್ಲ. ಬೇರೆ ಉದ್ದೇಶಕ್ಕೆ ಈ ಹಣ ಬಳಕೆಯಾಗಿಲ್ಲ. ಶಾಸಕರ ನಿಧಿಗೇ ಬಳಕೆಯಾಗಲಿದೆ ಜೊತೆ ಈ ವರ್ಷ 50 ಲಕ್ಷ ಬಿಡುಗಡೆ ಆಗಿದ್ದು, ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತಿದ್ದಂತೆ ಎರಡನೇ ಕಂತು 50 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.