ಬೆಂಗಳೂರು : ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಸರ್ಕಾರ ಪ್ರತ್ಯೇಕ ಆದೇಶ ಹೊರಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸದಾಶಿವನಗರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಕೊರೊನಾ ಲಸಿಕೆ ಖರೀದಿಸಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ವಿಚಾರವಾಗಿ ನೂರು ಕೋಟಿ ಬಳಕೆಗೆ ಸರ್ಕಾರದ ಅನುಮತಿ ಕೇಳಿದ್ದೇವೆ.
ಸಿದ್ದರಾಮಯ್ಯನವರು ಕೂಡ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸಿಎಂ ಆದೇಶಕ್ಕೆ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಲಸಿಕೆಗೆ ಬಳಕೆ ಮಾಡಬಹುದು. ಅದಕ್ಕೆ ಅವಕಾಶವಿದೆ. ಸರ್ಕಾರ ಸೂಕ್ತ ತೀರ್ಮಾನ ಮಾಡಲಿ ಎಂದರು.
ಉಪ ಚುನಾವಣೆಯಿಂದ ಶಿಕ್ಷಕರ ಸಾವಿನ ವಿಚಾರ ಮಾತನಾಡಿ, ಉಪ ಚುನಾವಣೆ ಮಾಡುವ ಅವಶ್ಯಕತೆ ಇರಲಿಲ್ಲ. ಇನ್ನಷ್ಟು ದಿನ ಮುಂದೂಡಬೇಕಿತ್ತು. ಬಲಿಯಾಗಿರುವ ಶಿಕ್ಷಕರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಲೋಕಸಭೆ ಉಪಚುನಾವಣೆ ಫಲಿತಾಂಶ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷ ಈ ಬಾರಿ ಉಪ ಚುನಾವಣೆಯಲ್ಲಿ ಕಡಿಮೆ ಅಂತರದ ಸೋಲು ಅನುಭವಿಸಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ನಾವು ಉತ್ತಮ ಯಶಸ್ಸು ಕಂಡಿದ್ದೇವೆ. ಗೆಲುವಿನ ಸಮೀಪ ಬಂದಿದ್ದೆವು.
ಹೆಚ್ಚುಕಮ್ಮಿ ಮಾನಸಿಕವಾಗಿ ನಾವು ಗೆದ್ದಂತೇ. ತಾಂತ್ರಿಕವಾಗಿ ನಾವು ಸೋತಿರಬಹುದು. ಆದರೆ, ಮಾನಸಿಕವಾಗಿ ಗೆದ್ದಿದ್ದೇವೆ ಎಂಬ ಸಂತೋಷ ಇದೆ. ಬಿಜೆಪಿಯವರು ಗೆಲ್ಲಲು ಅವರ ಪ್ರಯತ್ನ ಮಾಡಿದ್ದಾರೆ, ನಾವು ಗೆಲ್ಲಲು ನಮ್ಮ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.