ಬೆಂಗಳೂರು : ವಿಧಾನಮಂಡಲ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಜಾರಿಗೊಳಿಸಲಾದ ವಿಪ್ಗೆ, ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಡೋಂಟ್ ಕೇರ್ ಎನ್ನುವ ನಿಲುವು ತಳೆದಿದ್ದಾರೆ.
ಸದನಕ್ಕೆ ಗೈರಾಗಿ ವಿಪ್ ಉಲ್ಲಂಘಿಸಿದ್ದಕ್ಕೆ ಅನರ್ಹತೆ ಗೊಳಿಸಿದರೆ ಕಾನೂನು ಹೋರಾಟ ಮಾಡಲು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಎಂಎಲ್ಎಗಳು ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ.
ಇಂದಿನಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಶಾಸಕರಿಗೆ ಜಾರಿಗೊಳಿಸಿರುವ ವಿಪ್ಗೆ ಬಂಡಾಯ ಶಾಸಕರು ಹೆಚ್ಚಿನ ಮಹತ್ವ ನೀಡಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಿರುವಾಗ ತಮ್ಮ ಮೇಲೆ ವಿಪ್ ಹೇಗೆ ಜಾರಿಗೊಳಿಸಲು ಬರುತ್ತದೆ? ಎನ್ನುವುದು ಬಂಡಾಯ ಶಾಸಕರ ವಾದವಾಗಿದೆ.
ರೆಬಲ್ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅವರು ಇನ್ನೂ ಅಂಗೀಕರಿಸದಿದ್ದಾಗ ಅವರು ತಾಂತ್ರಿಕವಾಗಿ ಪಕ್ಷದ ಶಾಸಕರಾಗಿರುತ್ತಾರೆ. ಹಾಗಾಗಿ ಅವರಿಗೆ ಶಾಸಕರಿಗೆ ನೀಡುವ ವಿಪ್ ಅನ್ವಯವಾಗುತ್ತದೆ. ಸದನಕ್ಕೆ ಗೈರು ಹಾಜರಾದರೆ, ಸದನದಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ವಿಪ್ ಉಲಂಘಿಸಿದಂತಾಗುತ್ತದೆ ಎನ್ನುವುದು ಆಡಳಿತ ಪಕ್ಷಗಳ ವಾದವಾಗಿದೆ.
ವಿಪ್ ಉಲ್ಲಂಘನೆ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅನುಚ್ಛೇದ 10 ರಲ್ಲಿ ತಿಳಿಸಿದಂತೆ ಅಂತಹ ಶಾಸಕರನ್ನು ಅನರ್ಹಗೊಳಿಸುವಂತೆ ಹಾಗೂ ಆರು ವರ್ಷ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸುವಂತೆ ದೂರು ದಾಖಲಿಸಲಾಗುತ್ತದೆ. ಎಂಬ ಎಚ್ಚರಿಕೆ ಸಂದೇಶವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಅತೃಪ್ತ ಶಾಸಕರಿಗೆ ರವಾನಿಸಿದ್ದಾರೆ.
ದೋಸ್ತಿ ಪಕ್ಷಗಳು ವಿಪ್ ಹೆಸರಲ್ಲಿ ಹೆದರಿಸುವ ತಂತ್ರಕ್ಕೆ ಮಣಿಯದೆ ಅನರ್ಹತೆಗೊಳಿಸಿದರೆ ಅದರ ವಿರುದ್ಧ ಸ್ಪೀಕರ್, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸುವ ಅಭಿಲಾಷೆ ಹೊಂದಿದ್ದಾರೆಂದು ಹೇಳಲಾಗಿದೆ.
ರಾಜಕೀಯ ಅಸ್ಥಿರತೆ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ವಿಪ್ ಅನ್ನ ಬಂಡಾಯ ಶಾಸಕರ ಮೇಲೆ ಅಸ್ತ್ರವನ್ನಾಗಿ ದೋಸ್ತಿ ಪಕ್ಷಗಳು ಬಳಸಿಕೊಂಡಿವೆ . ಇದೇ ಅಸ್ತ್ರವನ್ನು ಆಡಳಿತ ಪಕ್ಷಗಳ ಮೇಲೆ ತಿರುಗುಬಾಣವಾಗುವಂತೆ ಪ್ರಯೋಗಿಸಲು ರೆಬೆಲ್ ಶಾಸಕರು ಸಿದ್ದರಾದಂತಿದೆ.