ಬೆಂಗಳೂರು: ರಾಜ್ಯ ಬಜೆಟ್ ಮಂಡನೆ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಚಟುವಟಿಕೆ ಗರಿಗೆದರಿದ್ದು,ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ನೀಡುವಂತೆ ಶಾಸಕರ ತಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ರೇಣುಕಾಚಾರ್ಯ, ರಾಜುಗೌಡ, ಕಳಕಪ್ಪ ಬಂಡಿ ಸೇರಿದಂತೆ 10-15 ಶಾಸಕರ ತಂಡ ಭೇಟಿ ನೀಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿತು. ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ತೆರವಾಗಿರುವ ಸಚಿವ ಸ್ಥಾನವನ್ನು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಬೇಕು, ಸರ್ಕಾರ ರಚನೆಯಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಪ್ರಮುಖವಾಗಿದೆ ಹಾಗಾಗಿ ಅವರ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ಅವರ ಕುಟುಂಬಕ್ಕೆ ನೀಡಬೇಕು ಎಂದು ಒತ್ತಾಯಿಸಿದೆ.
ಶಾಸಕರ ಮನವಿ ಆಲಿಸಿದ ಸಿಎಂ ಬಾಲಚಂದ್ರ ಜಾರಕಿಹೊಳಿ ಸಧ್ಯ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ. ಅದರಲ್ಲಿಯೇ ಮುಂದುವರೆಯಲಿ, ಸಚಿವ ಸ್ಥಾನವನ್ನು ಮತ್ತೆ ರಮೇಶ್ ಜಾರಕಿಹೊಳಿಗೆ ಕೊಡೋಣ, ಈ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತೇನೆ ಆದಷ್ಟು ಬೇಗ ರಮೇಶ್ ಜಾರಕಿಹೊಳಿಯವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರ ತಂಡಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.