ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಹೆಸರಿರುವ ಬೋರ್ಡ್ಗಳಿಗೆ ಕಿಡಿಗೇಡಿಗಳು ಮಸಿ ಬಳಿದಿರುವ ವಿಚಾರ ಬೆಳಕಿಗೆ ಬಂದಿದೆ.
ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಪಕ್ಕದಲ್ಲೇ ಇರುವ ಶ್ಯಾಂಪುರ ಮುಖ್ಯರಸ್ತೆಯ ಕ್ರಾಸ್ಗಳಲ್ಲಿ ಶಾಸಕರ ಹೆಸರಿದ್ದ ಬೋರ್ಡ್ಗಳಿಗೆ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿದ್ದಾರೆ.
ಗಲಭೆ ನಡೆದ ಬಳಿಕ ಮಸಿ ಬಳಿದಿರುವ ಗುಮಾನಿಯಿದ್ದು, ಶಾಸಕರ ಮೇಲಿನ ದ್ವೇಷದಿಂದ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಇಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿದ್ದು, ಘಟನೆ ಕುರಿತು ಸಿಸಿಬಿ ಡಿಸಿಪಿ ರವಿಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಸಮಯ ಶಾಸಕರು ಸಿಸಿಬಿ ಡಿಸಿಪಿ ಜೊತೆ ಚರ್ಚೆ ನಡೆಸಿದರು. ಎಷ್ಟೊತ್ತಿಗೆ ಗಲಭೆ ಪ್ರಾರಂಭವಾಯಿತು, ಮನೆ ಮೇಲೆ ಎಷ್ಟೊತ್ತಿಗೆ ದಾಳಿ ನಡೆಯಿತು, ಎಷ್ಟು ಜನ ಗಲಭೆಕೋರರು ಮನೆಗೆ ನುಗಿದ್ದರು, ರಾಜಕೀಯವಾಗಿ ಯಾರಾದ್ರು ದಾಳಿ ನಡೆಸಿದ್ದಾರಾ ಎಂಬುದರ ಕುರಿತು ಶಾಸಕರಿಂದ ಮಾಹಿತಿ ಪಡೆದರು.