ಬೆಂಗಳೂರು: ಕೊರೊನಾ ಹೆಸರು ಹೇಳಿ ಅನುದಾನ ತಡೆದು ಶಾಸಕರನ್ನು ಬೀದಿ ಬೀದಿ ಅಲೆಸಬೇಡಿ, ನಮಗೆ ಯಾವುದೇ ಹೊಸ ಅನುದಾನವೂ ಬೇಡ, ಕೊಡಬೇಕಾದ ಅನುದಾನ ಕೊಟ್ಟರೆ ಸಾಕು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸರ್ಕಾರಕ್ಕೆ ಕೇಳಿಕೊಂಡರು.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ, ಇಲ್ಲೂ ನಿಮ್ಮದೇ ಸರ್ಕಾರ ಇದೆ. ಬರಕ್ಕೂ ದುಡ್ಡಿಲ್ಲ, ಪ್ರವಾಹಕ್ಕೂ ದುಡ್ಡಿಲ್ಲ, ನಮ್ಮ ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ. ಕೇಂದ್ರದ ಜುಟ್ಟು ಹಿಡಿದು ಯಾಕೆ ಕೇಳುತ್ತಿಲ್ಲ?, 25 ಜನ ಸಂಸದರನ್ನು ಕಳುಹಿಸಿದ್ದೀರಲ್ಲಾ, ಅವರನ್ನು ಮುಂದೆ ಬಿಟ್ಟು ಕೇಳಿ, ನಮ್ಮಂತಹ ಬಡಪಾಯಿಗಳಿಗೆ ಅನ್ಯಾಯ ಮಾಡಬೇಡಿ, ನಾವು ಕಚೇರಿಯಿಂದ ಕಚೇರಿಗೆ ಅಲೆಯುವುದೇ ಆಗಿದೆ. ನಾವು ಪಾಪ ಮಾಡಿದ್ದೇವೆ, ನಮಗೆ ಹೊಸ ಬಜೆಟ್ ಹಣ ಬೇಡ, ನೀವೇ ಎಲ್ಲವನ್ನೂ ತೆಗೆದುಕೊಂಡು ಹೋಗಿ, ನಮಗೆ ಹಳೇ ಬಜೆಟ್‍ನ ಅನುದಾನ ಏಕೆ ಕೊಡುತ್ತಿಲ್ಲ ಎಂದು ಕೇಳಿದ್ರು.
ಕೊರೊನಾ… ಕೊರೊನಾ… ಅಂತ ಎಲ್ಲದಕ್ಕೂ ಅಡ್ಡಿ ಮಾಡುತ್ತಿದ್ದೀರಾ, ನಿಮಗೆ ಮಾತ್ರ ಯಾವುದೇ ಕೊರೊನಾ ಇಲ್ಲ, ನಮ್ಮಂತಹ ಬಡಪಾಯಿ ಶಾಸಕರಿಗೆ ಮಾತ್ರ ಕೊರೊನಾ ಅಡ್ಡ ತರ್ತೀರಾ ಎಂದು ಹರಿಹಾಯ್ದರು.
ನಾವು ಕ್ಷೇತ್ರದ ಜನರನ್ನು ಉಳಿಸಿಕೊಳ್ಳಬೇಕು, ಕೈ ಮುಗಿಯುತ್ತೇವೆ. ನಮಗೆ ನ್ಯಾಯ ಕೊಡಿ ಎಂದು ಕೇಳಿದ ಅವರು, ಕೋವಿಡ್‍ಗೆ 5,375 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಹಣವನ್ನು ಬೊಕ್ಕಸದಿಂದ ತೆಗೆದು ಖರ್ಚು ಮಾಡಿದ್ದೀರಾ ಇಲ್ಲ. ಇಲಾಖೆಯಿಂದ ತೆಗೆದಿದ್ದೀರಾ? ಇದರ ಬಗ್ಗೆ ನೀವು ಎಲ್ಲೂ ಯಾಕೆ ಸ್ಪಷ್ಟಪಡಿಸಿಲ್ಲ ಎಂದು ಪ್ರಶ್ನಿಸಿದ್ರು.
ಇಂದಿನ ಬಜೆಟ್‍ನ 2.33 ಲಕ್ಷ ಕೋಟಿ ಹಣ ಎಲ್ಲಿ ಹೋಯಿತು. ಸಂಪುಟದಲ್ಲಿಟ್ಟುಕೊಂಡು ಬೇಕಾದಂತೆ ಖರ್ಚು ಮಾಡಿದ್ದೀರಾ, ಒಬ್ಬೊಬ್ಬರು 500, 1000 ಕೋಟಿ ರೂ. ಪಡೆದುಕೊಂಡಿದ್ದೀರಾ, ನಮ್ಮಂತಹ ಬಡಪಾಯಿಗಳಿಗೆ ಮಾತ್ರ ಅನ್ಯಾಯ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೆವಿನ್ಯೂ ಕೊರತೆಯನ್ನು ತುಂಬಬೇಕು. ನಾವು 202 ನಿಗಮ ಮಂಡಳಿ ಮಾಡಿ ಅಂತ ಹೇಳಿದ್ವಾ?. ಅಭಿವೃದ್ಧಿ ಕೈಬಿಟ್ಟರೆ ಸಾಲ ಕಟ್ಟುವುದಕ್ಕೆ ಆಗುತ್ತಾ?. 5373 ಕೋಟಿ ರೂ. ಕೋವಿಡ್ ಗೆ ಹೇಗೆ ಖರ್ಚಾಯ್ತು?. ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ಹೋಗಬೇಕು. ಉತ್ತರ ಕೊಡುವಾಗ ಇದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ನಮ್ಮಪ್ಪ ಹೆಬ್ಬೆಟ್ಟು, ನಾನು ಏನೋ ಕಾಲೇಜು ಮೆಟ್ಲು ಹತ್ತಿದ್ದೆ. ಎಕನಾಮಿಕ್ಸ್ ಓದಿ ಸ್ವಲ್ಪ ತಿಳಿದುಕೊಡಿದ್ದೇನೆ. ಅದಕ್ಕೆ ಸ್ವಲ್ಪ ನಾನು ಕೇಳ್ತಿದ್ದೇನೆ ಅಷ್ಟೇ. ಮೊದಲು ನೀವು ಕೇಂದ್ರದ ಮೇಲೆ ಒತ್ತಡ ತನ್ನಿ. ಬರಬೇಕಾದ ಜಿಎಸ್ಟಿ ಹಣವನ್ನು ತರಬೇಕು.
ಒಟ್ಟು 2 ಲಕ್ಷ ಕೋಟಿ ಹಣ ರಾಜ್ಯದಿಂದ ತೆರಿಗೆಯಾಗಿ ಕೇಂದ್ರಕ್ಕೆ ಹೋಗುತ್ತಿದೆ. ಗುಜರಾತ್ ನಲ್ಲಿ 33 ಸಾವಿರ ಕೋಟಿ ರೂ. ಖರ್ಚು ಮಾಡಿ ಕ್ರೀಡಾಂಗಣ ಕಟ್ಟಿದ್ದಾರೆ. ಇದಕ್ಕೆ ರಾಜ್ಯಗಳ ತೆರಿಗೆ ಹಣವನ್ನು ಅಲ್ಲಿ ವೆಚ್ಚಮಾಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಹಣ ಖರ್ಚು ಮಾಡ್ತಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಏನೇನೂ ಸಿಗುತ್ತಿಲ್ಲ. ರಾಜ್ಯ ರಾಜ್ಯಗಳ ಮಧ್ಯೆ ತಾರತಮ್ಯವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆಗೆ 12 ಸಾವಿರ ಕೋಟಿ ರೂ. ನಿಗದಿಯಾಗಿದೆ. ಈಗಾಗಲೇ 5 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಈಗ 25 ಸಾವಿರ ಕೋಟಿ ರೂ. ಬೇಕು ಅನ್ನುತ್ತಿದ್ದಾರೆ. ಇಟ್ಟಿರುವ ಹಣ ರೈತರ ಪರಿಹಾರಕ್ಕೆ ಸಾಕಾಗಲ್ಲ. 53 ಕಿ.ಮೀ ಜಾಗವನ್ನು ರೈತರಿಂದ ಇದಕ್ಕೆ ನಾನು ಬಿಡಿಸಿಕೊಟ್ಟಿದ್ದೆ. ಆ ರೈತರು ದಿನವೂ ಮನೆ ಹತ್ತಿರ ಬರುತ್ತಿದ್ದಾರೆ. ಈಗ ನೀರಾವರಿಗೆ ಇಟ್ಟಿರುವ ಹಣ 20 ಸಾವಿರ ಕೋಟಿ ರೂ. ಹಣ. ಈ ಹಣದಲ್ಲಿ 5 ಸಾವಿರ ಕೋಟಿ ರೂ.ಗಳಷ್ಟು ಸಾಲಕ್ಕೆ ಹೋಗುತ್ತದೆ. ಉಳಿಯುವುದು ಕೇವಲ 15 ಸಾವಿರ ಕೋಟಿ. ಅಷ್ಟು ಹಣದಲ್ಲಿ ಏನು ಮಾಡಲು ಸಾಧ್ಯ.
ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೆಲ್ಲಿ ಮಾಡೋಕೆ ಸಾಧ್ಯ. ಹಣವಿಲ್ಲದೆ ಯೋಜನೆ ಮುಕ್ತಾಯವಾಗಲ್ಲ. ಯಾವ ರೂಪದಲ್ಲಿ ಸರ್ಕಾರ ಹಣ ತೊಡಗಿಸುತ್ತದೆ. ರಾಷ್ಟ್ರೀಯ ಯೋಜನೆಗಳೆಂದು ಇವುಗಳನ್ನು ಸೇರಿಸಿ ಆಗ 100 % ಗ್ರಾಂಟ್ ಸಿಗಬಹುದು. ಬೇರೆ ರಾಜ್ಯಗಳಿಗೆ ನೀಡಿದಂತೆ ರಾಷ್ಟ್ರೀಯ ಯೋಜನೆಯನ್ನು ನಮ್ಮ ರಾಜ್ಯಕ್ಕೆ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಪಂಚಾಯಿತಿಗೆ ಒಂದು ಪಬ್ಲಿಕ್ ಶಾಲೆ ತೆರೆಯಿರಿ :
ಖಾಸಗಿ ಶಾಲೆಗೆ ಬಡವರು ಶುಲ್ಕ ಕಟ್ಟುವುದಕ್ಕೆ ಆಗಲ್ಲ. ಬೇಕಾದರೆ ಖಾಸಗಿಯವರು ಪ್ರತಿಭಟನೆ ಮಾಡಿಕೊಳ್ಳಲಿ. ಅವರಿಂದ ನಮಗೇನು ಆಗಲ್ಲ. ಬಡವರ ಮಕ್ಕಳಿಗೆ ಶಿಕ್ಷಣ ಸಿಗಬೇಕು. ಹಾಗಾಗಿ, ಪಂಚಾಯಿತಿಗೆ ಒಂದು ಪಬ್ಲಿಕ್ ಶಾಲೆ ತೆರೆಯಿರಿ. ಇಂಗ್ಲೀಷ್ ಇಲ್ಲವೆಂದು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿಲ್ಲ. 15 ಜನ ಮಕ್ಕಳಿಗೆ ನಾಲ್ಕು ಜನ ಶಿಕ್ಷಕರಿದ್ದಾರೆ. ಸುಂದರ ಪಬ್ಲಿಕ್ ಶಾಲೆಗಳನ್ನ ಕಟ್ಟಿ. ದೊಡ್ಡ ಪಂಚಾಯಿತಿಯಾದರೆ ಎರಡು ಶಾಲೆ ಕಟ್ಟಿ. ಇರುವ ಶಾಲೆಗೆ ತ್ಯಾಪೆ ಹಾಕೋ ಕೆಲಸ ಬೇಡ. ಇವತ್ತು ಗ್ರಾಮೀಣಭಾಗದಲ್ಲಿ ಇಂತಹ ಪರಿಸ್ಥಿತಿಯಿದೆ ಎಂದು ಆಗ್ರಹಿಸಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು, ದೆಹಲಿ ದೂರವೇನಿಲ್ಲ. ಅಲ್ಲಿ ಖಾಸಗಿ ಶಾಲೆಯಲ್ಲಿರುವ ಮಕ್ಕಳನ್ನು ಬಿಡಿಸ್ತಿದ್ದಾರೆ. ಸರ್ಕಾರಿ ಶಾಲೆಗೆ ಮಕ್ಕಳನ್ನ ಸೇರಿಸ್ತಿದ್ದಾರೆ. ನಾನು ದೆಹಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿನ ಅರೇಂಜ್ ಮೆಂಟ್ ನಾನು ನೋಡಿದ್ದೇನೆ. ನಿಮ್ಮ ಕಣ್ಣಲ್ಲಿ ನೀರು ಬರದೆ ಇದ್ದರೆ ಜೀವಂತ ಶವವೇ. ಅಲ್ಲಿನ ಸರ್ಕಾರಿ ಶಾಲೆಗಳನ್ನ ನೋಡಬೇಕು. ಪಕ್ಷಗಳು ಬೇರೆಯಿರಬಹುದು, ಚಿಂತನೆ ಬೇರೆ ಇರಬಹುದು, ಆದರೆ ಶಿಕ್ಷಣದ ಬಗ್ಗೆ ನಾವು ಅಲ್ಲಿ ನೋಡಬೇಕು. ನಾವು ದೊಡ್ಡಮನುಷ್ಯರು ಇಲ್ಲಿದ್ದೇವೆ. ನಮ್ಮವೇ ಶಾಲೆಗಳು ಇರುತ್ತವೆ. ಪಬ್ಲಿಕ್ ಶಾಲೆ ಮಾಡುವುದಕ್ಕೆ ನಾವೇ ವಿರೋಧಿಸುತ್ತೇವೆ. ಆದೇ ಪರಿಸ್ಥಿತಿ ಇವತ್ತು ರಾಜ್ಯದಲ್ಲಿದೆ ಎಂದು ಹೇಳಿದರು.
ನಂತರ ಶಿವಲಿಂಗೇಗೌಡ ಮಾತು ಮುಂದುವರೆಸಿ, ಖಾಸಗಿ ಶಾಲೆಗಳಿಂದ ಬಡಮಕ್ಕಳನ್ನ ಬಿಡಿಸಬೇಕು. ನನ್ನದೇ ಇರಲಿ,ಸಂಬಂಧಿಕರದೇ ಇರಲಿ. ಖಾಸಗಿ ಶಾಲೆಗಳು ನಮ್ಮವೇ ಇರಲಿ ತೆಗೆದುಹಾಕಬೇಕು. ಪಬ್ಲಿಕ್ ಶಾಲೆಗಳನ್ನು ತೆರೆಯಬೇಕು ಎಂದರು. ಇಂಗ್ಲೀಷ್ ಓದಿರುವವರನ್ನು ಶಿಕ್ಷಕರನ್ನಾಗಿ ಮಾಡಿ. ಕನ್ನಡ ಶಿಕ್ಷಕರನ್ನೂ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.