ಬೆಂಗಳೂರು: ಶಾಸಕ ಶರತ್ ಬಚ್ಚೇಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಬುಧವಾರ ರಾತ್ರಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದ ಶರತ್ ಬಚ್ಚೇಗೌಡ ಸದ್ಯ ಬಿಜೆಪಿಗೆ ತೆರಳಲಾಗದೆ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಪಕ್ಷೇತರರಾಗಿ ಉಳಿದುಕೊಂಡರೆ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಮನಗಂಡಿರುವ ಅವರು ಮುಂದಿನ ವಿಧಾನಸಭೆ ಚುನಾವಣೆ ಗೆಲುವು ಸೇರಿದಂತೆ ಹಲವು ವಿಧದ ಅನುಕೂಲ ನಿರೀಕ್ಷಿಸಿ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ಹಲವು ಹಂತಗಳ ಸಮಾಲೋಚನೆ ನಡೆದಿದ್ದು, ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಂತಿಮ ಹಂತದ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಆದಷ್ಟು ಶೀಘ್ರವೇ ಅವರು ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ. ಅವರ ತಂದೆ ಬಿ ಎನ್ ಬಚ್ಚೇಗೌಡ ಹಾಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಚ್ಚೇಗೌಡ ಸೋಲನುಭವಿಸಿದ್ದರು. ಎಂಟಿಬಿ ನಾಗರಾಜ್ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ ಅನಿವಾರ್ಯವಾಗಿ ಅವರಿಗೆ ಕಾಂಗ್ರೆಸ್ ಆದ್ಯತೆಯ ಆಯ್ಕೆಯಾಗಿ ಪರಿಣಮಿಸಿದೆ. ಈ ಭೇಟಿ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ, ಎಂಎಲ್ಸಿ ರವಿ ಉಪಸ್ಥಿತರಿದ್ದರು.
ಡಿಕೆಶಿ ಪ್ರವಾಸ :
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಮತ್ತು ನಾಳೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಸಂಜೆ ಇಂಡಿಗೋ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಲಿರುವ ಅವರು ಅಲ್ಲಿಯೇ ತಂಗಲಿದ್ದಾರೆ. ಶುಕ್ರವಾರ ಬೆಳಗ್ಗೆ ಬಳ್ಳಾರಿ ಜಿಲ್ಲೆಯ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ 1.30ಕ್ಕೆ ಬೆಳಗಾವಿಗೆ ಆಗಮಿಸಿ, ಹುಬ್ಬಳ್ಳಿಯ ದಿ.ಪ್ರಕಾಶ ಉಳ್ಳಾಗಡ್ಡಿಮಠ ಅವರ ಪುತ್ರ ರಜತ್ ಉಳ್ಳಾಗಡ್ಡಿಮಠ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರಿಯ ಪುತ್ರಿ ಸುಶ್ಮಿತಾ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ 8 ಗಂಟೆಗೆ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.