ಬೆಂಗಳೂರು: ಕನ್ನಡ ಚಿತ್ರರಂಗದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ ಇಂದಿಗೆ 8 ದಿನಗಳು ಕಳೆದಿವೆ. ಅಪ್ಪುವಿನ ಸರಳತೆ, ಸಮಾಜಕ್ಕೆ ನೀಡಿರುವ ಸೇವೆಯನ್ನ ಮರೆಯೋದಿಕ್ಕೆ ಆಗಲ್ಲ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ, ಪುನೀತ್ ರಾಜ್ಕುಮಾರ್ ಸಮಾಧಿಗೆ ಇವತ್ತಿಗೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ನೆಚ್ಚಿನ ನಟನ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಕುಟುಂಬ ಸಮೇತರಾಗಿ ಆಗಮಿಸಿ, ಡಾ.ರಾಜ್ ಕುಮಾರ್ ಹಾಗು ಪಾರ್ವತಮ್ಮ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ರೇಣುಕಾಚಾರ್ಯ, ಪುನೀತ್ ಮಾಡಿರುವ ಸೇವೆ ನಮಗೆ ಆದರ್ಶವಾಗಿದೆ. ಪುನೀತ್ ರಾಜ್ಕುಮಾರ್ ಮಾಡಿರುವ ಸೇವೆ ನನಗೆ ತುಂಬಾ ಇಷ್ಟವಾಗಿದೆ. ಹೀಗಾಗಿ ದೀಪಾವಳಿ ದಿನ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದೇನೆ. ಪುನೀತ್ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ.
ಪುನೀತ್ ರಾಜ್ಕುಮಾರ್ ನಡೆಸುತ್ತಿದ್ದ ಶಕ್ತಿಧಾಮದಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಕುಟುಂಬಸ್ಥರು ಒಪ್ಪಿದರೆ ಪುನೀತ್ ರಾಜ್ ಕುಮಾರ್ ನಡೆಸುತ್ತಿದ್ದ ಶಕ್ತಿಧಾಮಕ್ಕೆ ನಮ್ಮ ಕೈಲಾದ ಸಹಾಯ ಮಾಡುತ್ತೇನೆ. ಹಾಗೆಯೇ ಪುನೀತ್ ಹಾದಿಯಲ್ಲೇ ನಾವು ನೇತ್ರದಾನ ಮಾಡುತ್ತೇವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾನ ಮಾಡಿದರು.
ಪುನೀತ್ ರಾಜ್ಕುಮಾರ್, ಅಕಾಲಿಕ ಮರಣದಿಂದ ಅವರ ಕುಟುಂಬಕ್ಕೆ ಹಾಗು ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಪುನೀತ್ ರಾಜ್ಕುಮಾರ್ ನಟಿಸಿದ ಸಾಮಾಜಿಕ ಕಳಕಳಿಯ ಚಿತ್ರಗಳು ನಮಗೆ ಇಷ್ಟವಾಗಿವೆ. ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಭಾವಚಿತ್ರ ಹಾಕಿ ಅಭಿಮಾನಿಗಳು ಗೌರವ ಸಲ್ಲಿಸಿದ್ದಾರೆ.
ಕೊರೊನಾ ಸಮಯದಲ್ಲಿ ನಾನು ರಸಮಂಜರಿ ಕಾರ್ಯಕ್ರಮಗಳನ್ನು ಮಾಡಿದ್ದೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಪುನೀತ್ ರಾಜ್ಕುಮಾರ್ ಅವರನ್ನು ಕ್ಷೇತ್ರಕ್ಕೆ ಕರೆದೊಯ್ದು ಕಾರ್ಯಕ್ರಮ ನೀಡಬೇಕೆಂದಿದ್ದೆ. ಆದರೆ ಅದು ಈಡೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.