ಬೆಂಗಳೂರು: ಒಮಿಕ್ರೋನ್ ಭೀತಿ ಹಿನ್ನೆಲೆ ಬೆಳಗಾವಿಯಲ್ಲಿ ಅಧಿವೇಶನಕ್ಕೆ ಬಿಜೆಪಿ ಶಾಸಕರಿಂದಲೇ ಅಪಸ್ವರ ವ್ಯಕ್ತವಾಗಿದೆ. ಈ ಸಂಬಂಧ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಮಗ್ರ ಕರ್ನಾಟಕ ದೃಷ್ಟಿಯಿಂದ ಬೆಳೆಗಾವಿಯಲ್ಲಿ ಅಧಿವೇಶನ ನಡೆಸುವುದು ಒಳ್ಳೆಯದು ಮತ್ತು ಸ್ವಾಗತಕರ. ಕೊರೊನಾ ಆತಂಕ ಇರೋದ್ರಿಂದ, ಪ್ರಾಣ ಕಳೆದುಕೊಳ್ಳುವ ಆತಂಕ ಇದೆ. ಹಲವರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ಹೋಗಿದ್ದರು. ಆ ಹಂತಕ್ಕೆ ಹೋಗಿರೋದ್ರಲ್ಲಿ ನಾನೂ ಒಬ್ಬ. ಹಲವು ಅಧಿಕಾರಿಗಳು ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಮರುಪರಿಶೀಲಿಸುವುದು ಉತ್ತಮ ಎಂದರು.
ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಸಿಎಂ ಮತ್ತೊಮ್ಮೆ ಪರಿಶೀಲನೆ ಮಾಡಲಿ ಅಂತ ಮನವಿ ಮಾಡ್ತೀನಿ. ಎಷ್ಟೋ ಜನ ಆತಂಕದಲ್ಲಿದ್ದಾರೆ, ಆದ್ರೆ ಹೇಳಿಕೊಳ್ಳುತ್ತಿಲ್ಲ. ಜನರೂ ಕೂಡ ಸಹಕರಿಸಬೇಕು. ಒಮಿಕ್ರೋನ್ ಬಂದು ಆತಂಕ ಹೆಚ್ಚಿಸಿದೆ. ಹೀಗಾಗಿ ನಮ್ಮ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಆದ್ರೂ ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಹೆಚ್ಚಾಗಿರೋದೇ ಆತಂಕ. ವಿಧಾನಸಭಾ ಅಧಿವೇಶನ ಅಲ್ಲೂ ನಡೆದಿದೆ, ಯಾರೂ ನಡೆಸದೆ ಬಿಟ್ಟಿಲ್ಲ. ನೌಕರರಿಗೆ, ಅಧಿಕಾರಿಗಳಿಗೆ, ಶಾಸಕರಿಗೆ ಮರುಪರಿಶೀಲನೆಯಿಂದ ಅನುಕೂಲ ಆಗಲಿದೆ ಎಂದು ಶಾಸಕ ಕುಮಾರಸ್ವಾಮಿ ತಿಳಿಸಿದರು.
ಎಲ್ಲರಿಗೂ ಪ್ರಾಣ ಬಹಳ ಮುಖ್ಯ. ಬಹುತೇಕ ಶಾಸಕರು ಆತಂಕದಲ್ಲಿದ್ದಾರೆ. ಮಹಾರಾಷ್ಟ್ರ ಹಾಗೂ ಕೇರಳದ ಗಡಿಯಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿದೆ. ನೌಕರರಿಗೆ, ಶಾಸಕರಿಗೆ, ಅಧಿಕಾರಿಗಳಲ್ಲಿ ಆತಂಕ ಇದೆ. ಬೆಂಗಳೂರಿನಲ್ಲೇ ಅಧಿವೇಶನ ನಡೆಸಿದರೆ ಉತ್ತಮ. ಬೆಳಗಾವಿ ಭಾಗದ ಜನರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಿರಾಣಿ ಮುಂದಿನ ಸಿಎಂ ಎಂಬ ಕೆ.ಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಲು ಎಂ.ಪಿ ಕುಮಾರಸ್ವಾಮಿ ನಿರಾಕರಿಸಿದರು. ಆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಾಯಕತ್ವ ಬದಲಾವಣೆ ಬೇಕೋ ಬೇಡೋ ಎಂಬುದನ್ನ ಪಕ್ಷ ನಿರ್ಧರಿಸಲಿದೆ. ಈ ಕುರಿತು ನಾನು ಏನನ್ನೂ ಮಾತನಾಡುವುದಿಲ್ಲ ಎಂದು ತಿಳಿಸಿದರು.