ಬೆಂಗಳೂರು: ರಾಜ್ಯದಲ್ಲಿ ಕೃಷಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಹೆಚ್ಚಿಸುವುದರ ಜೊತೆಗೆ ಕೃಷಿ ಪದವೀಧರರ ನಿರುದ್ಯೋಗ ನಿವಾರಣೆಗೆ ಕೃಷಿ ಚಿಕಿತ್ಸಾಲಯಗಳನ್ನು ಆರಂಭಿಸಬೇಕು ಎಂದು ಜೆಡಿಎಸ್ ಸದಸ್ಯ ಡಿ.ಸಿ.ತಮ್ಮಣ್ಣ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಇಲಾಖಾವಾರು ಅನುದಾನದ ಬೇಡಿಕೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ ಕಾಲೇಜುಗಳನ್ನು ಹೆಚ್ಚಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ, ಕೃಷಿ ಕಾಲೇಜುಗಳು ಪದವೀಧರರನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ. ಕೃಷಿ ಅಧಿಕಾರಿಗಳೆಂದರೆ ಈ ಹಿಂದೆ ರೈತರ ಹೊಲಗದ್ದೆಗೆ ತೆರಳಿ ವಿಸ್ತೃತವಾಗಿ ಪರಿಶೀಲನೆ ನಡೆಸುತ್ತಿದ್ದರು. ಆದರೆ, ಕೃಷಿ ಪದವೀಧರರು ಹೊಲ - ಗದ್ದೆಗಳಿಗೆ ಭೇಟಿ ನೀಡುತ್ತಿಲ್ಲ. ಹೀಗಾಗಿ ಕೃಷಿ ಪಾಲಿಟೆಕ್ನಿಕ್‌ಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಕಾಲೇಜುಗಳಿಂದ ಹೊರ ಬರುತ್ತಿರುವ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಿ ಕೃಷಿ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಧನ ಸಹಾಯ ಮಾಡಬೇಕು. ಅವರಿಗೆ ಆದಾಯ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿ ಯೋಗ್ಯ ಭೂಮಿ ಪ್ರಮಾಣ ಕಡಿಮೆಯಾಗುತ್ತಿದೆ. ಅವೈಜ್ಞಾನಿಕ ಕೃಷಿ ಪದ್ಧತಿ, ರಾಸಾಯನಿಕ ಬಳಕೆಯಿಂದ ಕೃಷಿ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ವ್ಯವಸಾಯ ಯೋಗ್ಯ ಭೂಮಿ ಕಳೆದುಕೊಂಡರೆ ಮುಂದಿನ ಪೀಳಿಗೆಗೆ ಏನು ಕೊಡುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಹೀಗಾಗಿ ಸರ್ಕಾರವು ಕೃಷಿ ಯೋಗ್ಯ ಭೂಮಿ ಹೆಚ್ಚಿಸುವ ಮತ್ತು ಕೃಷಿಯತ್ತ ಯುವಕರನ್ನ ಸೆಳೆಯಲು ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.
ಸರ್ಕಾರ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಕೃಷಿ ಪಂಪ್‌ಸೆಟ್‌ಗಳಿಗೆ 15 ಗಂಟೆ ಸತತವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಕೃಷಿ ಪದಾರ್ಥಗಳಿಗೆ ಬೆಂಬಲ ಬೆಲ ನೀಡಬೇಕು. ಕೃಷಿ ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಹನಿ ನೀರಾವರಿಗೆ ಶೇ.100 ರಷ್ಟು ಸಬ್ಸಿಡಿ ಒದಗಿಸಬೇಕು. ರೈತ ಕುಟುಂಬದ ಒಬ್ಬ ಯುವಕನಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿದ ಅವರು, ನಕಲಿ ಗೊಬ್ಬರಗಳ ಸರಬರಾಜು ಅಧಿಕವಾಗಿದ್ದು, ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್ನಲ್ಲಿ ಮಧ್ಯಂತರ ಪರಿಹಾರ ಪಾವತಿ ಕಡ್ಡಾಯವಲ್ಲ: ಹೈಕೋರ್ಟ್