ಬೆಂಗಳೂರು: ನಿಂಬೆಹಣ್ಣು ಸರ್ಕಾರ ಉಳಿಸುತ್ತೆ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ರಮಡಾ ರೆಸಾರ್ಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಸದನ ಮುಂದೆ ಹಾಕಿ ಕಾಲ ಕಳೆಯೋಕೆ ಪ್ರಯತ್ನ ನಡೆಯುತ್ತಿದೆ. ಅವರದ್ದೇ ಶಾಸಕರ ಮೇಲೆ ನಂಬಿಕೆ ಇಲ್ಲ. ಅಧ್ಯಕ್ಷರು ಮತ್ತು ಸಿಎಲ್ಪಿ ನಾಯಕರು ಶಾಸಕರಿಗೆ ಗಾಳ ಹಾಕಿ ಕಾಯ್ತಾ ಇದಾರೆ. ಇದನ್ನು ಗಮನಿಸಿದರೆ ರೇವಣ್ಣ ನಿಂಬೆಹಣ್ಣು ತೋರಿಸಿರಬಹುದು. ಶಾಸಕರು ಅಧಿಕಾರ ಕೊಟ್ಟಿದ್ದಾರೆ. ಅವರನ್ನು ಕಳೆದುಕೊಂಡ ಮೇಲೆ ಅಧಿಕಾರ ಕಳೆದುಕೊಳ್ಳಲೇಬೇಕಾಗುತ್ತದೆ. ನಿಂಬೆಹಣ್ಣು ಕೆಲಸಕ್ಕೆ ಬರುವುದಿಲ್ಲ ಎಂದಿದ್ದಾರೆ.
ಕೆಲ ಅತೃಪ್ತ ಶಾಸಕರು ಖರೀದಿ ಮಾಡೋ ಶಕ್ತಿ ಹೊಂದಿದ್ದಾರೆ. ಈಗಲೂ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಬರಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕರು ಮನಸ್ಸಿಗೆ ನೋವಾಗಿರೋದನ್ನ ಹೇಳಿದ್ದಾರೆ. ಇನ್ನು ಸದನದಲ್ಲಿ ನಮ್ಮ ಪಕ್ಷದ ಶಾಸಕರ ಮೆಲೆ ಆರೋಪ ಮಾಡಿದರು. ಯಾವುದೇ ಒಬ್ಬ ಶಾಸಕನ ಮೇಲೆ ಆರೋಪ ಮಾಡಬೇಕಾದರೆ ನೋಟಿಸ್ ಕೊಡಬೇಕು. ಇದು ಸ್ಪೀಕರ್ ಅವರಿಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರ ರಾಜ್ಯಪಾಲರು, ಸಂವಿಧಾನಕ್ಕೂ ಮರ್ಯಾದೆ ಕೊಡ್ತಿಲ್ಲ. ಕೇವಲ ದಿನ ತಳ್ಳಬಹುದು. ಆದರೆ, ಅಧಿಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದರು.
ಗುಡ್ಡೆ ವ್ಯಾಪಾರ...
ನಾವು ಎಂದೂ ಅಧಿಕಾರಕ್ಕೆ ಬರಲ್ಲ. ನಾಳೆ ನಾವು ಅಧಿಕಾರ ಕಳೆದುಕೊಳ್ಳುತ್ತೀವಿ ಅಂತ ಅವರಿಗೆ ಗೊತ್ತು. ಈಗ ರಿಡಕ್ಷನ್ ರೇಟಲ್ಲಿ ಫೈಲ್ ಮೂ ಆಗ್ತಾ ಇದ್ದು, ಮರ್ಯಾದೆ ಬಿಟ್ಟು ಸ್ವಲ್ಪ ಕಾಸು ಮಾಡಿಕೊಳ್ಳಬಹುದು ಅಷ್ಟೆ. ಮಾಲ್ಗಳ ರೀತಿ ಸೀಸನಲ್ ಸೇಲ್ ನಡೀತಾ ಇದೆ. ಎಂಡ್ ಆಫ್ ಸೀಸನ್ ಸೇಲ್ ಸಂತೆಯಲ್ಲಿ ನಡೆಯುವ ಹಾಗೆ ಗುಡ್ಡೆ ಲೆಕ್ಕದಲ್ಲಿ ಟ್ರಾನ್ಸ್ಫರ್ ನಡೀತಿದೆ ಎಂದು ದೂರಿದರು.
ಕಾಂಗ್ರೆಸ್ನಲ್ಲಿ ನಮಗೂ ಬಾತ್ಮೀದಾರರು ಇದ್ದಾರೆ. ಕಾಂಗ್ರೆಸ್ನ ಆತ್ಮೀಯರು ನಮ್ಮ ಬಳಿ ಹೇಳುತ್ತಾರೆ. ಅದೇ ರೀತಿ ನಮ್ಮ ಆತ್ಮೀಯರೂ ನಮ್ಮ ಬಳಿ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ನಲ್ಲೂ ನಮಗೆ ಇಂಟಲಿಜನ್ಸ್ ಇದೆ ಎಂದರು.