ಬೆಂಗಳೂರು : ಡಿಸಿಎಂ ಬಳಿ ತಮ್ಮ ವಿರುದ್ಧ ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಯಾರು ದೂರು ನೀಡಿದ್ದಾರೋ ಅವರೆಲ್ಲ ಸಚಿವರ ಅಡುಗೆ ಮನೆಯಲ್ಲಿ ಇರುವವರು. ಪಾಪ ಅವರೇನು ಹೇಳ್ತಾರೆ, ಅದನ್ನು ಏನಂತ ಹೇಳಿರುತ್ತಾರೋ ಅದು ನನಗೆ ಗೊತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವರು ಶಾಸಕರುಗಳನ್ನು ಕರೆದುಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಕೆಡಿಪಿ ಮೀಟಿಂಗ್ ಮತ್ತೊಂದು ಮೀಟಿಂಗ್ ಮಾಡದೇ ಹೋದ್ರೆ ಏನು ಮಾಡುವುದು. ಅದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಅದನ್ನು ಬಿಟ್ಟರೆ ಬೇರೆ ಏನು ಇಲ್ಲ ಎಂದು ತಿಳಿಸಿದರು.
ತಮ್ಮ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ ಎಂಬ ಪ್ರಶ್ನೆಗೆ, ಯಾರ್ಯಾರು ಪಕ್ಷಕ್ಕೆ ದುಡಿದಿದ್ದಾರೆ ಚೆನ್ನಾಗಿ ಗೊತ್ತಿದೆ. ನಿತ್ಯ ಅವರೆಲ್ಲ ಅವರ ಅಡುಗೆ ಕೊಣೆಯಲ್ಲಿ ಇರುವವರು ಅಷ್ಟೇ. ನಾನು ಸಹ ನಾಳೆ 100 ಜನ ಕರೆದುಕೊಂಡು ಬಂದು ಹೇಳುವಷ್ಟು ತಾಕತ್ತು ಇದೆ. ಪಕ್ಷಕ್ಕೆ ನಾನು ಸಹ ಮುಜುಗರ ಮಾಡೋಕೆ ಆಗಲ್ಲ. ಅವೆಲ್ಲ ಮುಗಿದ ಕಥೆ ಎಂದು ಹೇಳಿದರು.
ನಾನು ನೇರವಾಗಿ ಹೇಳಿದ್ದು ಉಸ್ತುವಾರಿ ಸಚಿವರಿಗೆ ಅಷ್ಟೇ. ಅವರ ಕಾರ್ಯವೈಖರಿ ತಿದ್ದುಪಡಿ ಮಾಡಿಕೊಳ್ಳಲಿ ಎಂದಷ್ಟೇ ಹೇಳಿದ್ದೆ. ನನ್ನನ್ನು ಕಡೆಗಣಿಸುತ್ತಿದ್ದಾರೆ. ಅವರ ದೂರು ಬಗ್ಗೆ ನಾನು ತಲೆಕಡೆಸಿಕೊಳ್ಳಲ್ಲ. ಮಾಜಿ ಸಿಎಂ ಮಗ ಅಂತ ಸಚಿವ ಸ್ಥಾನ ಕೊಟ್ಟಿದ್ದಾರೆ. ನಾವು ಖುಷಿಯಾಗಿದ್ದೆವು. ನಾನು ಅವರು ಜಗಳ ಆಡಿಲ್ಲ ಬೈದುಕೊಂಡಿಲ್ಲ. ಪಕ್ಷದ ವರಿಷ್ಠರು ಕೇಳಿದರೆ ನಾನು ಉತ್ತರ ಕೊಡಲು ರೆಡಿ ಇದ್ದೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿ ಯಾಗಬೇಕು ಎಂಪಿ ಸೀಟು ಗೆಲ್ಲಬೇಕು. ಈ ಮಂತ್ರಿ ಕಟ್ಟಿಕೊಂಡು ನನಗೇನು ಆಗಬೇಕು ಎಂದು ಖಾರವಾಗಿ ಹೇಳಿದರು.
ಸಚಿವ ಮಧು ಬಂಗಾರಪ್ಪ ವಿರುದ್ಧ ಕಿಡಿ: ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಮೊದಲು ಮಧು ಬಂಗಾರಪ್ಪ ಯಾರು ಅಂತ ಗೊತ್ತಿಲ್ಲ'' ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಚಿವ ಮಧು ಬಂಗಾರಪ್ಪ ವಿರುದ್ಧ ಇತ್ತೀಚೆಗೆ ಶಿವಮೊಗ್ಗದಲ್ಲಿ ಅಸಮಾಧಾನ ಹೊರಹಾಕಿದ್ದರು.
ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕೆಡಿಪಿ ಸಭೆ ಸಭೆಗೆ ಕರೆದಿಲ್ಲ. ಇದರಿಂದ ನಾನು ಆ ಸಭೆಗೆ ಹೋಗುವುದಿಲ್ಲ. ನನ್ನದು ಯಾವುದೇ ಸಮಸ್ಯೆ ಇಲ್ಲ. ದೆಹಲಿ ನಾಯಕರು ನಮಗೆ ಗೊತ್ತಿಲ್ಲ. ನಮಗೆ ರಾಜ್ಯದ ನಾಯಕರು ಮಾತ್ರ ಗೊತ್ತು. ನಾನು ಕ್ಷೇತ್ರದ ಜನರಿಂದ ಗೆದ್ದಿದ್ದು, ಯಾರಿಂದಲೂ ಗೆದ್ದಿಲ್ಲ'' ಎಂದ ಅವರು, ''ನನಗೆ ಇಷ್ಟು ದಿನ ಮಂತ್ರಿ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನ ಇಲ್ಲ. ಆದರೆ, ನನಗೂ ಮಂತ್ರಿ ಸ್ಥಾನ ನೀಡಿ ಎಂಬುದು ನನ್ನ ಬೇಡಿಕೆ. ನಾನು ಯಾವುದೇ ಭಿನ್ನಮತ ಮಾಡಲ್ಲ. ನಾನು ಹೆದರಿಕೊಂಡು ಹೋಗಲು ಕುಮಾರ ಬಂಗಾರಪ್ಪ ಅಲ್ಲ. ನಾನು ಗೋಪಾಲಕೃಷ್ಣ ಬೇಳೂರು''ಎಂದು ಹೇಳಿದ್ದರು.
ಇದನ್ನೂಓದಿ:ಸಿದ್ದರಾಮಯ್ಯ ಅತೀ ಹೆಚ್ಚು ಸುಳ್ಳು ಹೇಳುವ ಸಿಎಂ: ಮಾಜಿ ಎಂಎಲ್ಸಿ ರಮೇಶ್