ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ನಾನು ದುಡ್ಡು ಪಡೆದಿದ್ದೇನೆ ಎಂಬ ಆಡಿಯೋ ಇವಾಗಿನಿಂದಲ್ಲ. ಇದರ ಹಿಂದೆ ರಾಜಕೀಯ ಕುತಂತ್ರ ಇದೆ ಎಂದು ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಹೇಳಿದರು.
ವಿಧಾನಸೌಧದಲ್ಲಿಂದು ಈ ಕುರಿತು ಮಾತನಾಡಿದ ಅವರು, 'ಪಿಎಸ್ಐ ನೇಮಕಾತಿ ಹಗರಣದಲ್ಲಿ ಆಡಿಯೋ ಬಹಿರಂಗ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನಾನು ಮಾತಾಡಿರುವುದು 2020ರಲ್ಲಿ. ಅದು 2020ರ ಆಡಿಯೋ ಇವಾಗಿನದಲ್ಲ. ಯಾವುದೋ ಕ್ಷೇತ್ರದ ಸಮಸ್ಯೆ ಬಗೆಹರಿಸುವುದಾಗಿ ಹೇಳುವುದಾಗಿ ಮಾತನಾಡಿದ್ದೆ. ಆವಾಗ ಪಿಎಸ್ಐ ಹಗರಣ ಇರಲಿಲ್ಲ. ಬೇರೆ ವಿಚಾರದ ಬಗ್ಗೆ ನಾನು ಮಾತಾಡಿದ್ದೆ. ಆದರೆ ನಾನು ಮಾತಾಡಿದ ಆಡಿಯೋವನ್ನು ಪಿಎಸ್ಐ ಹಗರಣಕ್ಕೆ ಜೋಡಿಸಿದ್ದಾರೆ' ಎಂದು ಕಿಡಿಕಾರಿದರು.
'ನನ್ನ ಆಡಿಯೋ ಎಡಿಟ್ ಮಾಡಲಾಗಿದೆ. ನಾನು ದಾಖಲೆ ಸಮೇತ ಸದನಕ್ಕೆ ಬಂದಿದ್ದೇನೆ. ಸಿಡಿ ಕೂಡ ಜೊತೆಗೆ ತಂದಿದ್ದೇನೆ. ಸದನದಲ್ಲಿ ಇದರ ಬಗ್ಗೆ ಪ್ರಸ್ತಾಪ ಆದಾಗ ನಾನು ಉತ್ತರ ಕೊಡುತ್ತೇನೆ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅಮೃತ ಘಳಿಗೆಯಲ್ಲಿ ಆಡಿಯೋ, ವಿಡಿಯೋ ರಿಲೀಸ್ ಮಾಡುತ್ತೇನೆ ಅಂದಿದ್ದಾರೆ. ಮಾಡಲಿ ಸಮಸ್ಯೆ ಇಲ್ಲ. ನಾನು ಅದನ್ನು ಸ್ವಾಗತಿಸುತ್ತೇನೆ. ಯಾವುದೇ ಹಣ ಪಡೆದಿಲ್ಲ. ಸರ್ಕಾರಕ್ಕೂ ಯಾವುದೇ ಹಣ ತಲುಪಿಸಿಲ್ಲ' ಎಂದು ಸ್ಪಷ್ಟಪಡಿಸಿದರು.
'ನಾನು ದುಡ್ಡು ಪಡೆದಿದ್ದೇನೆ ಎಂಬುದು ಸುಳ್ಳು ಆರೋಪ. ಅಭ್ಯರ್ಥಿ ತಂದೆ ಪರ್ಸಪ್ಪ ಅವರು ಶಾಸಕರಿಗೂ ತನಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಮಾಜಿ ಶಾಸಕರು ರಾಜಕೀಯ ಉದ್ದೇಶಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ದುಡ್ಡು ಕೊಟ್ಟಿದ್ದೇನೆ ಎಂದಿರುವ ಅಭ್ಯರ್ಥಿ ದೈಹಿಕ ಪರೀಕ್ಷೆಯನ್ನೇ ಪಾಸಾಗಿಲ್ಲ. ನನ್ನ ಬಳಿ ಸಂಪೂರ್ಣ ಆಡಿಯೋ, ವಿಡಿಯೋ ಇದೆ. ನಾನು ತಪ್ಪು ಮಾಡಿದರೆ ಅದನ್ನು ಅನುಭವಿಸುತ್ತೇನೆ. ಅವರು ತಪ್ಪು ಮಾಡಿದರೆ ಅವರು ಅನುಭವಿಸುತ್ತಾರೆ' ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಸಬ್ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ: ತಲೆಮರೆಸಿಕೊಂಡಿರುವ ಪಿಎಸ್ಐ ನವೀನ್ಗಾಗಿ ಸಿಐಡಿ ಹುಡುಕಾಟ