ಬೆಂಗಳೂರು: ರಾಜ್ಯದಲ್ಲಿ ಪಕ್ಷ ಹಾಗೂ ಸರ್ಕಾರದಲ್ಲಿ ಶೀಘ್ರದಲ್ಲೆ ಸಣ್ಣಪುಟ್ಟ ರಿಪೇರಿ ಕಾರ್ಯ ನಡೆಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಾಯಕತ್ವ ಗಟ್ಟಿಗೊಳಿಸುವುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಕೆಲವೊಂದು ರಿಪೇರಿ ಆಗಬೇಕಾಗಿದೆ. ಪಕ್ಷ ಸಂಘಟನೆ ಸೇರಿದಂತೆ ಕೆಲ ರಿಪೇರಿ ಆಗಬೇಕಾಗಿದೆ ಎಂದು ಅವರು ನುಡಿದರು.
ಸಚಿವ ನಿರಾಣಿ ದೆಹಲಿ ಪ್ರವಾಸ ಹೋಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಹೋಗ್ತಾರೆ, ಬರುತ್ತಾರೆ. ಆದರೆ ಹೈಕಮಾಂಡ್ ನಾಯಕರು ಮೊದಲೇ ಇವರ ಎಲ್ಲಾ ಜಾತಕಗಳನ್ನು ತರಿಸಿಕೊಂಡಿರುತ್ತಾರೆ. ಸುಮ್ನೆ ಹೋಗಿ ಗಿಫ್ಟ್ ಕೊಟ್ಟು ಬರಬೇಕು. ವರಿಷ್ಠರಿಗೆ ಎಲ್ಲಾ ಗೊತ್ತಿರುತ್ತದೆ ಎಂದರು.
ಯುಪಿ ಜನತೆ ಮೋದಿ ನಾಯಕತ್ನ ಒಪ್ಪಿದೆ: ಉತ್ತರಪ್ರದೇಶ ಗೂಂಡಾಗಳ ರಾಜ್ಯವಾಗಿತ್ತು. ಭ್ರಷ್ಟಾಚಾರ ಹೆಚ್ಚಾಗಿತ್ತು. ವಂಶವಾಹಿ ಆಡಳಿತ ಇತ್ತು. ಆದರೆ ಈಗ ಎಲ್ಲಾ ಬದಲಾವಣೆಯಾಗಿದೆ. ಹಾಗಾಗಿಯೇ ಯೋಗಿ ಆದಿತ್ಯನಾಥ್ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಪ್ರಧಾನಿ ಮೋದಿ ನಾಯಕತ್ವವನ್ನು ಯುಪಿ ಜನರು ಒಪ್ಪಿದ್ದಾರೆ ಎಂದರು.
ಕಾಂಗ್ರೆಸ್ ನಡಿಗೆ ಇಟಲಿ ಕಡೆಗೆ: ಕಾಂಗ್ರೆಸ್ನವರು ಕೃಷ್ಣೆಯ ಕಡೆ ನಡಿಗೆ ಹೋಗೋದು ಬೇಡ, ಅವರು ಇನ್ನು ಇಟಲಿ ಕಡೆ ನಡಿಗೆ ಹೋಗಲಿ, ಮೇಕೆದಾಟು, ವಿಧಾನಸೌಧಕ್ಕೂ ಹೋಗೋದು ಬೇಡ, ಅವರು ಇಟಲಿ ಕಡೆ ಹೋಗಲಿ ಎಂದರು.