ಬೆಂಗಳೂರು: ವಿಧಾನಸಭೆ ಶಾಸಕ ಸ್ಥಾನಕ್ಕೆ ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ರಾಜೀನಾಮೆಯಲ್ಲಿ ತಾಂತ್ರಿಕ ಲೋಪದೋಷಗಳಿರುವುದು ಕಂಡುಬಂದಿದೆ.
ವಿಧಾನಸಭೆ ನೀತಿ ನಿಯಮಾವಳಿ 202 (1) ರ ಪ್ರಕಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಇಚ್ಛಿಸುವ ಶಾಸಕ ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿ ಮಾಡಿ ತಮ್ಮ ಸ್ವಹಸ್ತಾಕ್ಷರದಲ್ಲಿ ಬರೆದ ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರಿಗೆ ನೀಡಬೇಕು.
ರಾಜೀನಾಮೆ ಪತ್ರದಲ್ಲಿ "ವಿಧಾನಸಭೆ ಸದಸ್ಯತ್ವ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ" ಎಂದು ತಿಳಿಸಿ ರಾಜೀನಾಮೆ ಅನ್ವಯವಾಗುವ ದಿನಾಂಕ ನಮೂದಿಸಬೇಕು. ನಂತರ ನಿಮ್ಮ ವಿಶ್ವಾಸಿ ಎಂದು ನಮೂದಿಸಿ ವಿಧಾನಸಭೆ ಅಧ್ಯಕ್ಷರ ವಿಳಾಸಕ್ಕೆ ಬರೆದ ರಾಜೀನಾಮೆ ಪತ್ರದಲ್ಲಿ ಸಹಿ ಹಾಕಿರಬೇಕು.
ವಿಧಾನಸಭೆ ಅಧ್ಯಕ್ಷರಿಗೆ ಖುದ್ದಾಗಿ ರಾಜೀನಾಮೆ ನೀಡದಿದ್ದರೆ, ಅಂಚೆಯಲ್ಲಿ, ಫ್ಯಾಕ್ಸ್ ಮೂಲಕ, ಕಚೇರಿಗೆ ಬೇರೊಬ್ಬರ ಮೂಲಕ ತಲುಪಿಸಿದ್ದರೆ, ಸಭಾಧ್ಯಕ್ಷರಿಗೆ ನೇರವಾಗಿ ನೀಡದಿದ್ದರೆ, ಸ್ಪೀಕರ್ ಅವರು ರಾಜೀನಾಮೆ ನೀಡಿಕೆ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸಿ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವೈಯಕ್ತಿಕ ನಿರ್ಧಾರವೇ ಅಥವಾ ಬಲವಂತದಿಂದ ನೀಡಿದ್ದೇ ಎನ್ನುವುದನ್ನು ಖಚಿತಪಡಿಸಿಕೊಂಡು ರಾಜೀನಾಮೆ ಅಂಗೀಕರಿಸುವ ಅಥವಾ ತಿರಸ್ಕರಿಸುವ ವಿವೇಚನಾ ಅಧಿಕಾರ ಸ್ಪೀಕರ್ ಅವರಿಗೆ ಇರುತ್ತದೆ.
ಆನಂದ್ ಸಿಂಗ್ ರಾಜೀನಾಮೆ ಕ್ರಮದ ತಪ್ಪುಗಳು...
ನಿಯಮಾವಳಿಗಳಿಗೆ ಹೋಲಿಕೆ ಮಾಡಿ ಗಮನಿಸಿದರೆ ಆನಂದ್ ಸಿಂಗ್ ಅವರು ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿ ಮಾಡಿ ತಮ್ಮ ಸ್ವಹಸ್ತಾಕ್ಷರ ಇರುವ ರಾಜೀನಾಮೆ ಪತ್ರ ಸಲ್ಲಿಸಿರುವುದನ್ನು ಹೇಳಿಲ್ಲ. ಹಾಗೂ ರಾಜೀನಾಮೆ ಸಲ್ಲಿಸಿದದ ಫೋಟೊವನ್ನು ಸಹ ಬಿಡುಗಡೆ ಮಾಡಿಲ್ಲ. ಆದರೆ ರಾಜ್ಯಪಾಲರನ್ನ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿರುವ ಸಂಗತಿ ತಿಳಿಸಿರುವ ಫೋಟೊ ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಆನಂದ್ ಸಿಂಗ್ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಗೆ ತಲುಪಿದೆ ಎಂದು ಮಾತ್ರ ಸಭಾಧ್ಯಕ್ಷರ ಕಚೇರಿ ಸ್ಪಷ್ಟನೆ ನೀಡಿದೆ. ನೇರವಾಗಿ, ಖುದ್ದಾಗಿ ಭೇಟಿ ಮಾಡದೆ ನೀಡಿರುವ ಆನಂದ್ ಸಿಂಗ್ ರಾಜೀನಾಮೆಯನ್ನು ಅಂಗೀಕಾರ ಮಾಡುವ ಅಥವಾ ತಿರಸ್ಕರಿಸು ವಿವೇಚನಾ ಅಧಿಕಾರ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇದೆ. ಆನಂದ್ ಸಿಂಗ್ ರಾಜೀನಾಮೆ ತಿರಸ್ಕರಿಸುವ ಅಧಿಕಾರ ಸಹ ಸಭಾಧ್ಯಕ್ಷರಿಗೆ ಈ ಪ್ರಕರಣದಲ್ಲಿದೆ.
ಒಂದು ವೇಳೆ ಆನಂದ್ ಸಿಂಗ್ ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿ ಮಾಡಿ ಸ್ವಹಸ್ತಾಕ್ಷರ ಇರುವ ರಾಜೀನಾಮೆ ಪತ್ರ ನೀಡಿದ್ದರೆ, ಬೇರೆ ಯಾವುದೇ ಅವಕಾಶಗಳಿಲ್ಲದೇ ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕಾಗುತ್ತದೆ. ಆನಂದ್ ಸಿಂಗ್ ಉದ್ದೇಶ ಪೂರ್ವಕವಾಗಿಯೇ ತಾಂತ್ರಿಕ ತೊಡಕುಗಳಿಂದ ರಾಜೀನಾಮೆ ಪತ್ರ ಅಂಗೀಕಾರವಾಗದಿರಲಿ ಎಂದು ನಿಯಮಾವಳಿ ಪಾಲಿಸದೇ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೀಗೆ ಮಾಡಿರಬಹುದು ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಾರೆ.
ರಮೇಶ ಜಾರಕಿಹೊಳಿ ರಾಜೀನಾಮೆಯ ತಪ್ಪುಗಳು...
ಇನ್ನು ಶಾಸಕ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ನೀಡಿರುವ ರಾಜೀನಾಮೆ ಪತ್ರ ಕ್ರಮಬದ್ಧವಾಗಿದೆ. ಆದರೆ ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ನೀಡದಿರುವುದುರಿಂದ ನಿಯಮಾವಳಿ ಪಾಲಿಸಿಲ್ಲ ಎಂದು ತಿಳಿದುಬಂದಿದೆ.
ಸ್ಪೀಕರ್ ಅವರನ್ನು ಭೇಟಿ ಮಾಡಿ ಅವರ ಕೈಯಲ್ಲಿಯೇ ರಾಜೀನಾಮೆ ಪತ್ರ ಸಲ್ಲಿಸಿದ್ದರೆ ವಿಳಂಬ ಮಾಡದೇ ರಾಜೀನಾಮೆ ಅಂಗೀಕರಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಅವರು ವಿಧಾನಸಭೆ ನೀತಿ ನಿಯಮಾವಳಿಗಳನ್ನು (202 (1) ) ಪಾಲಿಸದಿರುವುದರಿಂದ ಅವರ ರಾಜೀನಾಮೆ ಅಂಗೀಕರಿಸುವ ಹಾಗೂ ತಿರಸ್ಕರಿಸುವ ಅಧಿಕಾರ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇದೆ.
ಶಾಸಕಾರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಈ ಬಾರಿ ರಾಜೀನಾಮೆ ನೀಡಿರುವ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನಿಯಮಗಳನ್ನು ಪಾಲಿಸಿಲ್ಲವೇ ಎನ್ನುವ ಅನುಮಾನ ಸಹ ಮೂಡುತ್ತಿದೆ. ತಾಂತ್ರಿಕ ತಪ್ಪುಗಳಿಗೆ ಅವಕಾಶ ನೀಡದೇ ರಾಜೀನಾಮೆ ಪತ್ರ ಸಲ್ಲಿಸಲು ಅವಕಾಶ ಇದ್ದರೂ ಪರೋಕ್ಷ ದಾರಿಯಲ್ಲಿ ರಾಜೀನಾಮೆ ನೀಡಿರುವ ಹಿಂದಿನ ಉದ್ದೇಶ ಕಾಂಗ್ರೆಸ್ ಜತೆ ಮತ್ತೆ ಚೌಕಾಸಿ ಮಾಡುವುದಾಗಿದೆಯೇ ಎನ್ನುವ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿವೆ.