ಬೆಂಗಳೂರು: ತಮ್ಮ ಮನೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯಬೇಕು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆಗ್ರಹಿಸಿದ್ದಾರೆ.
ಭೋವಿ ಸಮಾಜದ ನಾಯಕರೊಂದಿಗೆ ತಮ್ಮ ಸುಟ್ಟುಹೋದ ಮನೆಗೆ ಆಗಮಿಸಿದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಮನೆಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಭೋವಿ ಸಮಾಜದ ಮುಖಂಡ ಕೊಟ್ರೇಶ್ ಜೊತೆಗಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸ್ ಮೂರ್ತಿ, ನನಗೆ ಅನ್ಯಾಯವಾಗಿದೆ. ಆದರೆ ನಾನು ಪಕ್ಷ ಬಿಟ್ಟು ಎಲ್ಲೂ ಹೋಗಿಲ್ಲ. ಘಟನೆಯ ವಿಚಾರದಲ್ಲಿ ರಾಜಕೀಯ ಮಾಡಿದರೆ ಏನು ಮಾಡೋದು. ಎರಡು ಪಕ್ಷಗಳ ಸತ್ಯಶೋಧನ ಸಮಿತಿಗಳು ಮನೆಗೆ ಭೇಟಿ ನೀಡುತ್ತಿವೆ. ಆದರೆ ಈ ಸತ್ಯಶೋಧನ ಸಮಿತಿಗಳಿಂದ ನನಗೆ ಯಾವುದೇ ನಿರೀಕ್ಷೆ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಸತ್ಯ ಹೊರಬರಬೇಕು. ಸ್ಥಳೀಯ ರಾಜಕೀಯದಿಂದಲೇ ಅನಾಹುತ ಆಗಿದೆ ಎಂದಾದರೆ ಅದು ತನಿಖೆಯಿಂದ ಹೊರ ಬರಲಿ ಎಂದರು.
ಘಟನೆ ಬಳಿಕ ಸಂಪತ್ ರಾಜ್ ಸೇರಿದಂತೆ ಯಾರೂ ನನ್ನನ್ನು ಭೇಟಿ ಮಾಡಿಲ್ಲ, ಮಾತೂ ಆಡಿಲ್ಲ. ಸದ್ಯ ಸಿಬಿಐ ತನಿಖೆ ಆಗಬೇಕೆಂದು ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದರು.