ಬೆಂಗಳೂರು: ಕೊರೊನಾ ಮಹಾಮಾರಿ ಭೀತಿ ಹಿನ್ನೆಯಲ್ಲಿ ರಾಜ್ಯ ಸರ್ಕಾರ ಮಾ. 31ರವರೆಗೆ ನಗರ ಸೇರಿದಂತೆ 9 ಜಿಲ್ಲೆಗಳಿಗೆ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳ ಒತ್ತಡದಲ್ಲಿ ರಸ್ತೆಗಿಳಿದಿದ್ದಾರೆ. ಏರ್‌ಪೋರ್ಟ್ ರಸ್ತೆಯ ಯಲಹಂಕ, ಬ್ಯಾಟರಾಯನಪುರ ಹೆಬ್ಬಾಳದಲ್ಲಿ ಲಾಕ್ ಡೌನ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯಲಹಂಕ ಹಳೇ ನಗರ ಸಂತೆ ಸರ್ಕಲ್ನಲ್ಲಿ ಜನತೆ ಸಹಜ ಸ್ಥಿತಿಯಲ್ಲಿ ಓಡಾಡುತ್ತಿದ್ದರೆ, ಬಹುತೇಕ ಹೋಟೆಲ್ಗಳು, ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಎನ್.ಇ.ಎಸ್, ಕೊಡಿಗೇಹಳ್ಳಿ ಸರ್ಕಲ್, ಬ್ಯಾಟರಾಯನಪುರ ಸರ್ಕಲ್ಗಳಲ್ಲಿ ಖಾಸಗಿ ವಾಹನಗಳು ಸೇರಿದಂತೆ ಬಿಎಂಟಿಸಿ ಬಸ್ಸುಗಳ ಓಡಾಡ ಎಂದಿನಂತಿತ್ತು. ಇನ್ನು ಆರ್.ಎಂ.ಝಡ್ ಹಾಗೂ ಗರುಡಾ ಮಾಲ್, ಮೋರ್ ಮುಚ್ಚಿದ್ದರೆ, ಡಿ-ಮಾರ್ಟ್, ವಿಶಾಲ್ ಮಾರ್ಟ್, ರಾಯಲ್ ಮಾರ್ಟ್, ಲೋಯಲ್ ಸಿಟಿ, ದ ಬಿಗ್ ಮಾರ್ಟ್ ಸೇರಿ ಇನ್ನಿತರ ಸೂಪರ್ ಮಾರ್ಕೆಟ್ಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು.
ಕೆಲವೇ ಕೆಲವು ಅಂಗಡಿಗಳನ್ನು ಹೊರತುಪಡಿಸಿದರೆ ಇನ್ನುಳಿದ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಆದರೆ, ಬಿಬಿಎಂಪಿ ನಿರ್ಲಕ್ಷ್ಯದಿಂದ ರಸ್ತೆ ಬದಿ ಹಣ್ಣು ಮಾರಾಟಗಾರರು, ಕಬ್ಬಿನ ಹಾಲಿನ ಅಂಗಡಿಗಳು ರಾಜಾರೋಷವಾಗಿ ತೆರದಿದ್ದವು.