ಬೆಂಗಳೂರು: ಸರ್ಕಾರ ಘೋಷಿಸಿರುವ ಲಾಕ್ಡೌನ್ಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಆಟೋ ಚಾಲಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿಲಿಕಾನ್ ಸಿಟಿಯಲ್ಲಿ ನಿತ್ಯ ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರ ಹಿತ ಕಾಪಾಡುವ ಹಿನ್ನೆಲೆಯಲ್ಲಿ ಸರ್ಕಾರ ನಾಳೆಯಿಂದ ಒಂದು ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿದೆ. ಇದನ್ನು ಸಾಮಾನ್ಯ ಜನತೆ ಸ್ವಾಗತಿಸಿದ್ದು, ತರಕಾರಿ, ಹೂವಿನ ವ್ಯಾಪಾರಿಗಳು, ಪೇಪರ್ ಅಂಗಡಿಯವರು, ಆಟೋ, ಹೋಟೆಲ್ ಮಾಲೀಕರು ಕೊಂಚ ಅಸಮಾಧಾನ ಹೊರ ಹಾಕಿದ್ದಾರೆ.

ಒಂದು ವಾರ ಲಾಕ್ಡೌನ್ನಿಂದ ಕೊರೊನಾ ಹತೋಟಿಗೆ ಬರಲು ಸಾಧ್ಯವಿಲ್ಲ. ನಮಗೆ ದಿನದ ಕೂಲಿ ಸಿಗದಿದ್ದರೆ ನಾವು ಜೀವನ ಸಾಗಿಸುವುದು ಹೇಗೆ? ಸರ್ಕಾರ ಒಂದೆರಡು ಗಂಟೆಯಾದ್ರೂ ವ್ಯಾಪಾರಕ್ಕೆ ಅವಕಾಶ ಕೊಟ್ಟರೂ ಪೊಲೀಸರು ನಮ್ಮನ್ನು ಓಡಿಸುತ್ತಾರೆ. ವ್ಯಾಪಾರ ಇಲ್ಲದೇ ನಾವು ಮನೆಯಲ್ಲಿ ಇದ್ದರೆ ಊಟಕ್ಕೆ ಸಮಸ್ಯೆಯಾಗುತ್ತದೆ ಎಂದು ಹೂವಿನ ವ್ಯಾಪಾರಿ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
ಈ ಕುರಿತಂತೆ ಆಟೋ ಚಾಲಕರೊಬ್ಬರು ಮಾತನಾಡಿದ್ದು, ಬೇರೆ ರಾಜ್ಯ, ಊರಿಗೆ ಹೋದವರನ್ನು, ಹೊರಗಡೆಯವರನ್ನು ಮತ್ತೆ ಬೆಂಗಳೂರಿಗೆ ಬಿಡದಿದ್ದರೆ ಕೊರೊನಾ ಕಡಿಮೆಯಾಗಬಹುದು ಎಂದಿದ್ದಾರೆ.