ಬೆಂಗಳೂರು: ಅಪ್ರಾಪ್ತೆಯನ್ನು ಪ್ರೀತಿಸಿ ಮನೆಯಿಂದ ಕೊರೆದೊಯ್ದಿದ್ದ ತಪ್ಪಿಗೆ ಅಪಹರಣ ಹಾಗೂ ಅತ್ಯಾಚಾರ ಆರೋಪದಡಿ ಕಳೆದ ವರ್ಷ ಜೈಲು ಸೇರಿದ್ದ ಯುವಕನಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಕಲಬುರಗಿ ನಿವಾಸಿ ಅರುಣ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದ್ದು, ಷರತ್ತು ಬದ್ಧ ಜಾಮೀನು ನೀಡಿದೆ. ಆರೋಪಿತ ಯುವಕ ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯಗಳನ್ನು ನಾಶಪಡಿಸಬಾರದು. ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ಕ್ಷೇತ್ರ ಬಿಟ್ಟು ಹೋಗಬಾರದು. ಕೋರ್ಟ್ ಅನುಮತಿ ಇಲ್ಲದೆ ವಿಚಾರಣೆಗೆ ಗೈರು ಆಗಬಾರದು. ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ನೀಡಿದೆ.
ಇನ್ನು, ಆರೋಪಿತ ಯುವಕ ಸದ್ಯ ಇ-ಫೈಲಿಂಗ್ ಮೂಲಕವೇ ವೈಯಕ್ತಿಕ ಬಾಂಡ್ ಹಾಗೂ ಭದ್ರತಾ ಖಾತರಿಯ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ವಿಚಾರಣಾ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ ಅರ್ಜಿದಾರನನ್ನು ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಆರೋಪಿತ ಯುವಕ ಅರುಣ್ ತಾನು ಪ್ರೀತಿಸುತ್ತಿದ್ದ ಅಪ್ರಾಪ್ತೆಯನ್ನು 2019 ರ ಮಾ. 6 ರಂದು ಆಕೆಯ ಮನೆಯಿಂದ ಕರೆದೊಯ್ದಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಅಪ್ರಾಪ್ತೆಯ ತಂದೆ ತನ್ನ ಮಗಳನ್ನು ಅರುಣ್ ಅಪಹರಿಸಿದ್ದಾನೆ ಮತ್ತು ಅತ್ಯಾಚಾರ ಎಸಗಿದ್ದಾನೆ ಎಂದು ಮಾ. 19 ರಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಹೀಗಾಗಿ ಅರುಣ್ 2019 ರ ಮಾರ್ಚ್ ಕೊನೆಯಿಂದ ಜೈಲಿನಲ್ಲಿದ್ದ.
ಈ ನಡುವೆ ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಅರುಣ್ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ವಿಚಾರಣೆ ವೇಳೆ ಯುವತಿಗೆ 17 ವರ್ಷ ತುಂಬಿದ್ದು, ಮುಂದೆ ಆಕೆಯನ್ನು ಮದುವೆ ಮಾಡಿಕೊಂಡು ಚೆನ್ನಾಗಿ ನೋಡಿಕೊಳ್ಳುವುದಾಗಿ ಯುವಕ ಹೈಕೋರ್ಟ್‌ಗೆ ಭರವಸೆ ನೀಡಿದ್ದ. ಮತ್ತೊಂದೆಡೆ ಯುವಕ ಹಾಗೂ ಅಪ್ರಾಪ್ತೆ ಪರಸ್ಪರ ಪ್ರೀತಿಸಿ ಒಪ್ಪಿಗೆ ಮೇರೆಗೆ ಮನೆಬಿಟ್ಟು ಹೋಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಈ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್ ಯುವಕನಿಗೆ ಷರತ್ತು ಬದ್ಧ ಜಾಮೀನು ನೀಡಿದೆ.