ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳ ಸಮಗ್ರ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಗಡುವು ನೀಡಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲಾವಾರು ವಕ್ಫ್ ಆಸ್ತಿಗಳ ಸರ್ಕಾರಿ ಒತ್ತುವರಿ, ಖಾಸಗಿ ಒತ್ತುವರಿ, ನ್ಯಾಯಾಲಯದಲ್ಲಿರುವ ಪ್ರಕರಣ ಸೇರಿ ಸಮಗ್ರ ಮಾಹಿತಿ ಜಿಲ್ಲಾ ಅಧಿಕಾರಿಗಳು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ವಕ್ಪ್ ಆಸ್ತಿಗಳ ಒತ್ತುವರಿ ಬಗ್ಗೆ ಖಾಸಗಿ ಸಂಸ್ಥೆಯಿಂದಲೂ ಪ್ರತ್ಯೇಕ ಸಮೀಕ್ಷೆ ನಡೆಸಲಾಗುತ್ತಿದೆ. ಅಧಿಕಾರಿಗಳು ನೀಡುವ ವರದಿ, ಖಾಸಗಿ ಸಂಸ್ಥೆಯ ಮಾಹಿತಿ ತಾಳೆ ಆಗಬೇಕು. ಒಂದೊಮ್ಮೆ ತಾಳೆ ಆಗದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಗಳಲ್ಲಿ ಕೆಲವು ಅಧಿಕಾರಿಗಳು ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸದೆ ನ್ಯಾಯಾಲಯಕ್ಕೆ ಹಾಜಾರಾಗದೇ ಪರೋಕ್ಷವಾಗಿ ಒತ್ತುವರಿದಾರರ ಜತೆ ಶಾಮೀಲಾಗಿರುವ ಮಾಹಿತಿ ಇದೆ. ಈ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದೇವರ ಕೆಲಸ: ಮುಜರಾಯಿ ಹಾಗೂ ವಕ್ಫ್ ಇಲಾಖೆಯದು ದೇವರ ಕೆಲಸ. ಹಣ ಮಾಡಲು ಇಲ್ಲಿಗೆ ಬರಬಾರದು. ಆರೋಪ ಕೇಳಿ ಬಂದರೆ ಮುಲಾಜಿಲ್ಲದೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಕ್ಫ್ ಅಸ್ತಿಗಳ ರಕ್ಷಣೆಗೆ ಕಾಂಪೌಂಡ್ ಗೋಡೆ ನಿರ್ಮಿಸಲು ಅಗತ್ಯ ಇರುವ ಕಡೆ ಪ್ರಸ್ತಾವನೆ ಸಲ್ಲಿಸಬೇಕು. ವಕ್ಫ್ ಆಸ್ತಿ ಎಂದು ಗುರುತಿಸಲು ಏಕರೂಪದ ಕಾಂಪೌಂಡ್ ಹಾಕಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: 'ವಕ್ಫ್ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಅಸಡ್ಡೆ ತೋರುವುದನ್ನು ಸಹಿಸುವುದಿಲ್ಲ': ಸಚಿವ ಜಮೀರ್ ಅಹ್ಮದ್ ಖಾನ್