ಬೆಂಗಳೂರು: ಯಾವುದೇ ಕಾರಣಕ್ಕೂ ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ. ಆದರೆ, ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಉಳಿಸುವ ಕಾರಣಕ್ಕೆ ಅನಿವಾರ್ಯವಾಗಿ ಹಾಲಿನ ದರ ಪರಿಷ್ಕರಣೆ ಮಾಡಲೇಬೇಕಿದೆ, ಸಿಎಂ ಜೊತೆ ಚರ್ಚಿಸಿ ಎಷ್ಟು ಹೆಚ್ಚಳ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಅಮೂಲ್ ನಂದಿನಿ ವಿಲೀನ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ ಬೋಜೇಗೌಡ, ಅಮೂಲ್ ನವರು ಬಂದು ಇಲ್ಲಿ ಷಡ್ಯಂತ್ರ ಮಾಡಬಾರದು ಎಂದು ಹಲವು ಸಂಘಗಳು ಪ್ರತಿಭಟನೆ ಮಾಡಿವೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ ಅವರು, ಗೋಹತ್ಯೆ ಕಾಯ್ದೆ ಬಂತು, ನಂತರ ಜಿಲ್ಲೆಗಳಲ್ಲಿ ಗೋ ಶಾಲೆ ತೆರೆದರು. ಆದರೆ, ಯಾವ ಗೋಶಾಲೆಗಳಲ್ಲಿ ಮೇವು, ನೀರು ಒಳಗೊಂಡ ಸೌಲಭ್ಯ ಇಲ್ಲ, ಗೋಹತ್ಯೆ ನಿಷೇಧ ಕಾಯ್ದೆ ಬಂದ ನಂತರ ಗೋವುಗಳು ಲಕ್ಷದಷ್ಟು ಹೆಚ್ಚಾಗಬೇಕಿತ್ತು ಆದರೆ, ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರು.
ಹಾಲು ಉತ್ಪಾದಕರ ಸಂಘದ ವ್ಯಾಪ್ತಿಯಲ್ಲಿ ಶೇ.55 ರಷ್ಟು ಗಂಡು ಕರು ಬರುತ್ತವೆ. ಅವನ್ನು ಏನು ಮಾಡಬೇಕು, ಹೊರಗೆ ಕಳಿಸಲೇಬೇಕಲ್ಲ, ಇಷ್ಟೆಲ್ಲದರ ನಡುವೆಯೂ ನಮ್ಮ ಹಾಲು ಒಕ್ಕೂಟ ಉತ್ತಮವಾಗಿ ನಡೆಯುತ್ತಿದೆ. ಇಂತಹ ವೇಳೆ ಅಮೂಲ್ ಷಡ್ಯಂತ್ರ ತಡೆಯಬೇಕು, ನಮ್ಮ ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು. ತಿರುಪತಿ ಲಡ್ಡುಗೆ ನಮ್ಮ ನಂದಿನಿ ತುಪ್ಪ ಬೇಕು, ಇಂತಹ ಡೈರಿಗೆ ಕೈ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ನಂತರ ಮಾತನಾಡಿದ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ, ಅಮೂಲ್ನೊಂದಿಗೆ ನಂದಿನಿ ವಿಲೀನ ಹೇಳಿಕೆ ಅಮಿತ್ ಶಾ ನೀಡಿದಾಗ ಈ ವಿವಾದ ಸೃಷ್ಟಿಯಾಯಿತು. ಕೆಎಂಎಫ್ ಬೃಹತ್ ಸಂಸ್ಥೆ. ವಿಲೀನ ಮಾಡಿದರೆ ಹಲವಾರು ಸಮಸ್ಯೆ ಆಗಲಿದೆ, ಹಲವಾರು ಸೌಲಭ್ಯಗಳು, ಸಬ್ಸಿಡಿಗಳು ತಪ್ಪಲಿವೆ ಹಾಗಾಗಿ ವಿಲೀನ ಮಾಡದಂತೆ ಮತ್ತು ಸರ್ಕಾರದ ನಿಲುವು ಸ್ಪಷ್ಟಪಡಿಸಲು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ರೈತರಿಗೂ ಕಷ್ಟ ಇದೆ, ಒಕ್ಕೂಟವೂ ಕಷ್ಟದಲ್ಲಿದೆ ಹಾಗಾಗಿ ಬೇರೆಯವರ ಜೊತೆ ಸ್ಪರ್ಧೆ ಕಷ್ಟವಾಗುತ್ತಿದೆ. ಖಾಸಗಿಯವರು ಹೆಚ್ಚು ಹಣ ಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ರೈತರ ಹಾಲು ಹೋಗುತ್ತಿದೆ. ನಮ್ಮ ಒಕ್ಕೂಟ ನಷ್ಟದಲ್ಲಿವೆ. ಹಾಗಾಗಿ ಹಾಲಿನ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಲಿದ್ದೇವೆ. ಎಷ್ಟು ಹೆಚ್ಚಿಸಬೇಕು ಎಂದು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ದರ ಹೆಚ್ಚಳ ಅನಿವಾರ್ಯ ಎಂದು ಹಾಲಿನ ದರ ಹೆಚ್ಚಳದ ಸುಳಿವು ನೀಡಿದರು.
ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ, ಅಂತಹ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ. ಅವರೂ ಕೇಳೂ ಇಲ್ಲ, ನಾವು ಹೇಳಿಯೂ ಇಲ್ಲ, ಅಮೂಲ್ ಹಾಲಿನ ಮಾರುಕಟ್ಟೆ ರಾಜ್ಯದಲ್ಲಿ ತುಂಬಾ ಕಡಿಮೆ ಇದೆ. ಆನ್ ಲೈನ್ ನಲ್ಲಿ ಸಾವಿರ ಲೀಟರ್ ಮಾರಾಟ ಆಗುತ್ತಿದೆ ಅಷ್ಟೆ, ಕೆಎಂಎಫ್ಗೆ ಅಮೂಲ್ ನಿಂದ ಯಾವುದೇ ಪರಿಣಾಮ ಬೀರಿಲ್ಲ, ಖಾಸಗಿಯವರಿಗೆ ತೊಂದರೆಯಾಗಿದೆ ಅಷ್ಟೆ ಎಂದರು.
ಹಾಲಿನ ಪ್ರೋತ್ಸಾಹ ಧನ ಫೆಬ್ರವರಿವರೆಗೆ ಪಾವತಿಯಾಗಿದೆ. ಬಾಕಿ ಹಣ ಈಗ ಕೊಡಲಿದ್ದೇವೆ, ಹಾಲು ದರ ಹೆಚ್ಚಿಸುವ ಉದ್ದೇಶದಲ್ಲಿದ್ದೇವೆ. ರೈತರು, ಗ್ರಾಹಕರು, ಹಾಲು ಒಕ್ಕೂಟ ಎಲ್ಲವನ್ನೂ ಪರಿಗಣಿಸಿ ದರ ಪರಿಷ್ಕರಣೆ ಮಾಡಲಿದ್ದೇವೆ ಅದರಲ್ಲಿ ರೈತರಿಗೆ ಶೇ. 70, ಒಕ್ಕೂಟಗಳಿಗೆ ಶೇ.30ರ ಪಾಲು ಹಂಚಿಕೆಯ ಪ್ರಸ್ತಾಪ ಇದೆ. ಇದನ್ನೂ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ತಾಕತ್ತಿದ್ದರೆ 2004 ರಿಂದ ಇಲ್ಲಿಯವರೆಗಿನ ಎಲ್ಲ ಕಾಲದ ಅಕ್ರಮ ಆರೋಪಗಳನ್ನ ಲೋಕಾಯುಕ್ತ ತನಿಖೆಗೆ ವಹಿಸಿ: ನಾರಾಯಣಸ್ವಾಮಿ ಸವಾಲು