ಬೆಂಗಳೂರು: ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಒಪ್ಪಿದರೆ, ರಾಜ್ಯದಲ್ಲಿ ಜಾರಿಯಲ್ಲಿರುವ ಅನ್ನಭಾಗ್ಯ, ಉಚಿತ ವಿದ್ಯುತ್ ನಂತಹ ಯೋಜನೆಗಳು ಬಂದ್ ಆಗಲಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ರದ್ದು ಮಾಡುವ ಉದ್ದೇಶ ರಾಜ್ಯಕ್ಕಿಲ್ಲ: ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನ್ನಭಾಗ್ಯ, ಉಚಿತ ವಿದ್ಯುತ್ ನೀಡುವ ಯೋಜನೆಗಳನ್ನು ರದ್ದು ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ಆದರೆ ಉಚಿತ ಕೊಡುಗೆಗಳನ್ನು ರದ್ದು ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ, ನಾವು ಅನಿವಾರ್ಯವಾಗಿ ಅದನ್ನು ಒಪ್ಪಬೇಕಾಗುತ್ತದೆ ಎಂದರು.
ಸದ್ಯಕ್ಕೆ ರಾಜ್ಯದ ಜನರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಐದು ಕೆಜಿ ಅಕ್ಕಿ, ರಾಜ್ಯ ಸರ್ಕಾರದ ವತಿಯಿಂದ ಐದು ಕೆಜಿ ಅಕ್ಕಿ, ಪ್ರದೇಶಕ್ಕನುಗುಣವಾಗಿ ಎರಡು ಕೆಜಿ ರಾಗಿ, ಇಲ್ಲವೇ ಜೋಳ ಮತ್ತು ಒಂದು ಕೆಜಿ ತೊಗರಿ ಬೇಳೆ ನೀಡಲಾಗುತ್ತಿದೆ. ಈ ಪೈಕಿ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಸೆಪ್ಟಂಬರ್ ಅಂತ್ಯದವರೆಗೆ ನೀಡುವುದಾಗಿ ಹೇಳಿದೆ.
ಇದನ್ನೂ ಓದಿ: ಸಾಮಾಜಿಕ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಉಚಿತ ಕೊಡುಗೆ ಎನ್ನಲಾಗದು: ಡಿಎಂಕೆ ಪ್ರತಿಪಾದನೆ
ಒಂದು ವೇಳೆ ಕೇಂದ್ರ ಸರ್ಕಾರ ತನ್ನ ತೀರ್ಮಾನಕ್ಕೆ ಬದ್ಧವಾದರೆ ರಾಜ್ಯದ ಜನರಿಗೆ ನಾವು ಕೊಡುತ್ತಿರುವ ಐದು ಕೆಜಿ ಅಕ್ಕಿ, ಎರಡು ಕೆಜಿ ರಾಗಿ, ಇಲ್ಲವೇ ಜೋಳ ಮತ್ತು ಒಂದು ಕೆಜಿ ತೊಗರಿ ಬೇಳೆ ಮಾತ್ರ ಸಿಗುತ್ತದೆ. ರಾಜ್ಯ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಕೇಂದ್ರ ಸರ್ಕಾರ ಕೆಜಿಗೆ ಮೂರು ರೂಪಾಯಿ ದರದಲ್ಲಿ ನಮಗೆ ಪೂರೈಸುತ್ತಿದ್ದು, ನಾವು ಅದನ್ನು ಉಚಿತವಾಗಿ ಜನರಿಗೆ ಕೊಡುತ್ತಿದ್ದೇವೆ ಎಂದರು.
ಇದೇ ರೀತಿ ಕೇಂದ್ರ ಸರ್ಕಾರ ಕೊಡುವ ಅಕ್ಕಿ ಅನ್ನಭಾಗ್ಯ ಯೋಜನೆಗೆ ಕಡಿಮೆಯಾಗುವುದರಿಂದ ಹೆಚ್ಚುವರಿ ಅಕ್ಕಿಯನ್ನು ಕೆಜಿಗೆ 28 ರೂ.ಗಳಂತೆ ಖರೀದಿಸಿ ಜನರಿಗೆ ವಿತರಿಸುತ್ತಿದ್ದೇವೆ. ಕೊರತೆಯಾಗುವ ಅಕ್ಕಿಯ ಬಾಬ್ತಿನಲ್ಲಿ ನಾವು 600 ಕೋಟಿ ರೂ. ಗಳನ್ನು ಭರಿಸುತ್ತಿದ್ದು, ಕೇಂದ್ರ ಕೊಡುತ್ತಿರುವ ಅಕ್ಕಿಯ ಬಾಬ್ತಿನಲ್ಲಿ 1,900 ಕೋಟಿ ರೂ.ಗಳಷ್ಟು ಹಣವನ್ನು ಕೊಡುತ್ತಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಕುಚಲಕ್ಕಿ ನಮಗೆ ಲಭ್ಯವಾಗುತ್ತಿಲ್ಲ: ಜನರಿಗೆ ಕುಚಲಕ್ಕಿಯನ್ನು ಒದಗಿಸುವ ಸಲುವಾಗಿ ಬೆಂಬಲ ಬೆಲೆ ನೀಡಿ ಅದನ್ನು ಖರೀದಿಸಲು ತೀರ್ಮಾನಿಸಿದ್ದೇವಾದರೂ ಕುಚಲಕ್ಕಿ ನಮಗೆ ಲಭ್ಯವಾಗುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು. ಬೆಂಬಲ ಬೆಲೆ ನೀಡಿ ಕುಚಲಕ್ಕಿ ಖರೀದಿ ಮಾಡಲು ನಾವು ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಪ್ರಮಾಣದ ದರವನ್ನು ಕೇರಳದಲ್ಲಿ ನೀಡುತ್ತಿರುವುದರಿಂದ ಕುಚಲಕ್ಕಿ ಅಲ್ಲಿಗೆ ಪೂರೈಕೆಯಾಗುತ್ತಿದೆ. ಹೀಗಾಗಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ನುಡಿದರು.
3.30 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ ರದ್ದು: ರಾಜ್ಯದಲ್ಲಿ 3.30 ಲಕ್ಷ ಆಕ್ರಮ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಈ ಪೈಕಿ 85 ಸಾವಿರ ಮಂದಿ ಅದಾಯ ತೆರಿಗೆ ಕಟ್ಟುತ್ತಿದ್ದರು. 22 ಸಾವಿರ ಸರ್ಕಾರಿ ನೌಕರರಿದ್ದರು. ಅಕ್ರಮ ಕಾರ್ಡ್ಗಳನ್ನು ರದ್ದುಪಡಿಸಿದ್ದರೆ, 2.70 ಲಕ್ಷ ಮಂದಿಗೆ ಹೊಸದಾಗಿ ಕಾರ್ಡ್ ಕೊಟ್ಟಿದ್ದೇವೆ. ಇನ್ನೂ ಒಂದೂವರೆ ಲಕ್ಷ ಮಂದಿ ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದಿಂದ 550 ರೂ ಖರ್ಚು: ಈ ಹಿನ್ನೆಲೆ ಸಭೆ ನಡೆದಿದ್ದು, ಹೊಸತಾಗಿ ಒಂದೂವರೆ ಲಕ್ಷ ಮಂದಿಗೆ ಬಿಪಿಎಲ್ ಕಾರ್ಡ್ ನೀಡಲು ಹಣಕಾಸು ಇಲಾಖೆಯ ಅನುಮತಿ ಕೇಳಿದ್ದೇವೆ. ಅವರು ಒಪ್ಪಿಗೆ ಕೊಟ್ಟ ಕೂಡಲೇ ಕಾರ್ಡ್ ವಿತರಿಸುತ್ತೇವೆ. ಒಂದು ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಧಾನ್ಯ ಒದಗಿಸಲು ರಾಜ್ಯ ಸರ್ಕಾರ 550 ರೂ. ಖರ್ಚು ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಕಸ್ತೂರಿ ರಂಗನ್ ವರದಿಗೆ ತೀವ್ರ ವಿರೋಧ: ಈ ವರದಿಗೆ ಸಚಿವರು ವಿರೋಧ ವ್ಯಕ್ತಪಡಿಸಿದರು. ಈ ವರದಿಯನ್ನು ಒಪ್ಪಿದರೆ ನಾವು ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅನುಮತಿ ನೀಡುವುದು ಕಷ್ಟವಾಗುತ್ತದೆ. ಕೈಗಾರಿಕೆಗಳು ಬಂದರೆ ಉದ್ಯೋಗಾವಕಾಶಗಳು ಸೃಷ್ಟಿ ಆಗುತ್ತದೆ. ಇವತ್ತು ಕೆಲಸವಿಲ್ಲದ ಕೈಗಳಿಗೆ ಕೆಲಸ ಕೊಡಬೇಕು. ಕಸ್ತೂರಿ ರಂಗನ್ ವರದಿ ಒಪ್ಪಿದರೆ ಇದು ಸಾಧ್ಯವಿಲ್ಲ ಎಂದರು.
ವರದಿಯ ಜಾರಿ ಅಸಾಧ್ಯ: ಅರಣ್ಯ ಪ್ರದೇಶದ ಹೆಚ್ಚಳಗೊಳಿಸುವ ಹಿನ್ನೆಲೆಯಲ್ಲಿ ಇದು ಅನಿವಾರ್ಯ ಎಂದು ಕಸ್ತೂರಿ ರಂಗನ್ ವರದಿ ಹೇಳುತ್ತದೆ. ಆದರೆ ನೆರೆಯ ಮಹಾರಾಷ್ಟ್ರ, ತಮಿಳುನಾಡು, ಅಂಧ್ರಪ್ರದೇಶ, ಕೇರಳ ರಾಜ್ಯಗಳಿಗಿಂತ ಹೆಚ್ಚು ಪ್ರಮಾಣದ ಅರಣ್ಯ ನಮ್ಮಲ್ಲಿದೆ. ಈ ಹಿನ್ನೆಲೆ ಕಸ್ತೂರಿ ರಂಗನ್ ವರದಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಯಾವ ಕಾರಣಕ್ಕೂ ಈ ವರದಿಯ ಜಾರಿ ಅಸಾಧ್ಯ ಎಂದು ಹೇಳಿದರು.
ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ರಾಜ್ಯದಲ್ಲಿರುವ ಡೀಮ್ಡ್ ಅರಣ್ಯ ಪ್ರದೇಶವನ್ನು ಸರ್ವೇ ಮಾಡಿವೆ. ಈ ಭೂಮಿಯಲ್ಲಿ ಅರಣ್ಯದ ಕುರುಹು ಇರುವ 3.30 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಬಂದಿದೆ. ಉಳಿದಂತೆ 6.60 ಹೆಕ್ಟೇರ್ ಭೂಮಿ ಕಂದಾಯ ಇಲಾಖೆಯ ವಶಕ್ಕೆ ಹೋಗಿದೆ ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: 'ಉಚಿತ ಕೊಡುಗೆ' ಘೋಷಿಸಿದ್ದಕ್ಕೆ ರಾಜಕೀಯ ಪಕ್ಷಗಳ ನೋಂದಣಿ ರದ್ದು ಅಸಾಧ್ಯ : ಚುನಾವಣಾ ಆಯೋಗ
ಅತ್ಯಂತ ಹೆಚ್ಚಿನ ಆನೆ, ಹುಲಿ ಮತ್ತು ಚಿರತೆ ಇರುವ ನಂಬರ್ ಒನ್ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮುತ್ತಿದೆ. ಈ ಸಂಬಂಧ ಕೇಂದ್ರಕ್ಕೆ ವರದಿ ಸಲ್ಲಿಕೆಯಾಗಿದೆ. ನಮಗಿರುವ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಆನೆ, ಹುಲಿ ಮತ್ತು ಚಿರತೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿವೆ. ಈ ಪೈಕಿ ಆನೆ 650 ರಷ್ಟಿದ್ದು, ಹುಲಿ 600 ರಷ್ಟಿದೆ. ಚಿರತೆ 800 ರಷ್ಟಿದ್ದು, ಕೇಂದ್ರ ಸರ್ಕಾರ ಸದ್ಯದ್ರಲ್ಲೇ ಇದನ್ನು ಸ್ಪಷ್ಟಪಡಿಸಲಿದೆ ಎಂದರು.