ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಪುನಾರಂಭ ಕುರಿತು ಆರೋಗ್ಯಕರ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿದಿದೆ ಎಂಬಂತೆ ಬಿಂಬಿತವಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಪೋಷಕರ ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಜೂನ್ 10, 11 ಮತ್ತು 12ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳೂ ಸೇರಿದಂತೆ) ಪೋಷಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬೇಕೆಂದು ಜೂನ್ 1ರಂದು ಸುತ್ತೋಲೆ ಮೂಲಕ ಸೂಚಿಸಲಾಗಿದೆ. ಶಾಲೆಗಳನ್ನು ಯಾವಾಗ (ಎಂದಿನಿಂದ) ಪ್ರಾರಂಭ ಮಾಡಬೇಕು? (ನರ್ಸರಿ ಮತ್ತು ಪ್ರಾಥಮಿಕ ತರಗತಿಗಳು, ಉನ್ನತ ಪ್ರಾಥಮಿಕ ತರಗತಿಗಳು, ಪ್ರೌಢ ಶಾಲಾ ತರಗತಿಗಳು), ಕೊರೊನಾ ನಂತರದ ದಿನಗಳಲ್ಲಿ ಶಾಲೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತರಗತಿಗಳನ್ನು ನಡೆಸುವ ಬಗ್ಗೆ, ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಸುರಕ್ಷತಾ ಕ್ರಮಗಳ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ಶಾಲೆಗಳನ್ನು ಪ್ರಾರಂಭಿಸುವ ಯಾವುದೇ ನಿರ್ಧಾರವನ್ನು ಸರ್ಕಾರವು ತರಾತುರಿಯಲ್ಲಿ ತೆಗೆದುಕೊಳ್ಳುವುದಿಲ್ಲವೆಂಬ ಅಂಶವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪರ್ಯಾಯ ಬೋಧನಾ ಕ್ರಮಗಳಿಗೆ ಸರ್ಕಾರವು ಸ್ಪಷ್ಟ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದ್ದು, ಪ್ರತಿ ವಿದ್ಯಾರ್ಥಿಯ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸುವ ಸರ್ಕಾರದ ಅತಿ ದೊಡ್ಡ ಪ್ರಕ್ರಿಯೆಯ ಉದ್ದೇಶವನ್ನು ತಪ್ಪಾಗಿ ಅರ್ಥೈಸಿ ಖಾಸಗಿ ಲಾಬಿಗೆ ಮಣಿದ ಸರ್ಕಾರವೆಂದು ಬಿಂಬಿಸುತ್ತಿರುವುದು ದುರ್ದೈವ ಎಂದಿದ್ದಾರೆ.
ಎಳೆಯ ಮಕ್ಕಳ ಕುರಿತ ಪೋಷಕರ ಕಾಳಜಿಯನ್ನು ನಾನು ಸಂಪೂರ್ಣವಾಗಿ ಅರಿತಿದ್ದೇನೆ ಮತ್ತು ಆ ಕಾಳಜಿಗೆ ಅಗತ್ಯ ಮನ್ನಣೆ ನೀಡುತ್ತೇನೆ. ಆ ಮಕ್ಕಳಿಗೆ ಮತ್ತು ಪೋಷಕರಿಗೆ ಕಿಂಚಿತ್ ಆಪತ್ತು ತರುವ ಯಾವುದೇ ಕಾರ್ಯ ನಮ್ಮಿಂದ ಆಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಮಕ್ಕಳಲ್ಲಿ ಕಲಿಕೆಯನ್ನು ನಿರಂತರವಾಗಿ ಇಡಲು ದೂರದರ್ಶನದ ಪ್ರತ್ಯೇಕ ಶಿಕ್ಷಣ ಚಾನೆಲ್ ಪ್ರಾರಂಭಿಸುವುದು ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಸರ್ಕಾರ ಶೋಧಿಸುತ್ತಿದೆ. ಎಲ್ಲಾ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಬಳಿಕ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.