ಬೆಂಗಳೂರು : ಕೊರೊನಾ ಭೀತಿ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸ್ಥಗಿತಗೊಂಡಿತ್ತು. ಇದೀಗ ದ್ವಿತೀಯ ಪಿಯುಸಿ ವಿಜ್ಞಾನ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇದ್ದ ಅಡೆತಡೆಗಳು ಸಂಪೂರ್ಣ ನಿವಾರಣೆಯಾಗಿವೆ. ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಪೂರ್ಣಗೊಂಡು ಪರೀಕ್ಷಾ ಫಲಿತಾಂಶ ಪ್ರಕಟಗೊಳಿಸುವ ವಿಶ್ವಾಸವನ್ನು ಸಚಿವ ಸುರೇಶ್ ಕುಮಾರ್ ವ್ಯಕ್ತಪಡಿಸಿದರು.
ಬೆಂಗಳೂರಿನ ದಯಾನಂದ ಸಾಗರ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಇಂದು ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಉಪನ್ಯಾಸಕರ ಸಂಘಟನೆಗಳು ಇಲಾಖೆಯ ಕ್ರಮಕ್ಕೆ ತಮ್ಮ ಸಹಕಾರ ನೀಡುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿ ಅರಿತು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿವೆ ಎಂದರು.
ವಿಜ್ಞಾನ ಹೊರತುಪಡಿಸಿದಂತೆ ಅನ್ಯ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ಉಪನ್ಯಾಸಕರ ಸಹಕಾರದಿಂದ ಬಹುಪಾಲು ಪೂರ್ಣಗೊಂಡಿದೆ. ಅಂಕಗಳ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸುತ್ತಮುತ್ತಲಿನ 12 ಜಿಲ್ಲೆಗಳ ವಿಜ್ಞಾನ ಬೋಧಕರು, ಇಲಾಖೆಯ ನಿರ್ದೇಶನದಂತೆ ತಕ್ಷಣದಿಂದ ಕಡ್ಡಾಯವಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.