ಬೆಂಗಳೂರು: ಕೋವಿಡ್-19ರ ನಂತರದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ಶೈಕ್ಷಣಿಕ ಸಾಲಿಗೆ ಸೀಮಿತಗೊಳಿಸಿ 2017-18ನೇ ಸಾಲಿಗೆ ಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಅನುದಾನಿತ ಹಾಗೂ ಅನುದಾನ ರಹಿತ ಶಾಲೆ-ಪದವಿ ಪೂರ್ವ ಕಾಲೇಜುಗಳಿಗೆ ಹೆಚ್ಚುವರಿ ವಿಭಾಗ, ವಿಷಯ, ಭಾಷೆ ಮತ್ತು ಸಂಯೋಜನೆಗಳನ್ನು ಅನುಮತಿಸುವ ಹಾಗೂ ನವೀಕರಿಸುವ ಸಂದರ್ಭದಲ್ಲಿ ಅಗ್ನಿ ಸುರಕ್ಷತಾ ಪ್ರಮಾಣಪತ್ರ, ಕಟ್ಟಡ ಸುರಕ್ಷತಾ ಪ್ರಮಾಣಪತ್ರಗಳ ದಾಖಲೆಗಳನ್ನು ಸಲ್ಲಿಸಲು ವಿನಾಯಿತಿ ನೀಡಲಾಗಿದೆ. ಕಳೆದ ಶೈಕ್ಷಣಿಕ ಸಾಲಿನ ದಾಖಲೆಗಳ ಆಧಾರದಲ್ಲಿ ನೋಂದಣಿ, ನವೀಕರಣ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರದ ಸ್ಪಷ್ಟೀಕರಣ ಬಿಡುಗಡೆ ಮಾಡಲಾಗಿದ್ದು, ಆರ್.ಟಿ.ಇ. ಮರುಪಾವತಿ, ದಾಖಲಾತಿ/ಹಾಜರಾತಿಗಳ ನೋಂದಣಿ, ನವೀಕರಣದ ನೆಪದಲ್ಲಿ ಅನವಶ್ಯಕ ಸಮಸ್ಯೆಗಳಿಗೆ ಕಾರಣವಾಗದಂತೆ ಕ್ರಮ ವಹಿಸಬೇಕೆಂದು ಇಲಾಖಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ವಿದ್ಯಾರ್ಥಿಗಳ ಸುರಕ್ಷತೆ, ಶಾಲಾ ಸುರಕ್ಷತೆ ಕುರಿತಂತೆ ಕಠಿಣ ಕ್ರಮಗಳನ್ನು ಅನುಸರಿಸಬೇಕಾಗಿರುವುದು ಸರ್ಕಾರದ ಪ್ರಾಥಮಿಕ ಜವಬ್ದಾರಿಯಾಗಿದ್ದು, ಅಸ್ತಿತ್ವದಲ್ಲಿರುವ ಹಾಗೂ ಹೊಸ ಶಿಕ್ಷಣ ಸಂಸ್ಥೆಗಳಿಗೆ ವಿಶಿಷ್ಟ ನಿಯಮಗಳ ರಚನೆಗೆ ಈಗಾಗಲೇ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.
ಒಂದು ತಿಂಗಳ ಅವಧಿಯಲ್ಲಿ ಈ ಸಮಿತಿಯು ವಿದ್ಯಾರ್ಥಿ ಸಂವೇದಿತವಾದ ಶಾಲಾ ಸುರಕ್ಷತಾ ಕ್ರಮಗಳನ್ನು ಇಲ್ಲಿಯವರೆಗಿನ ನ್ಯಾಯಾಲಯಗಳ ತೀರ್ಪುಗಳನ್ನು ಸಮಗ್ರವಾಗಿ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.
ಶಾಲೆಯ ಭೌತಿಕ ಸುರಕ್ಷತೆ, ಮೂಲಭೂತ ಸೌಕರ್ಯ, ವಿಪತ್ತು ನಿರ್ವಹಣೆ, ಆರೋಗ್ಯ, ಸಾರಿಗೆ, ತುರ್ತು ಸನ್ನದ್ಧತೆ ಸೇರಿದಂತೆ ಎಲ್ಲಾ ಆಯಾಮಗಳನ್ನು ಈ ಸಮಿತಿಯು ಸಮಗ್ರವಾಗಿ ಅವಲೋಕಿಸಲಿದೆ. ಈ ಸಮಿತಿಯು ವಿದ್ಯಾರ್ಥಿಗಳ ಸುರಕ್ಷತೆಗೆ ಯಾವುದೇ ರಾಜಿ ಇಲ್ಲದ ರೀತಿಯಲ್ಲಿ ನಿಯಮಗಳನ್ನು ರೂಪಿಸಲಿದೆ ಎಂದು ಹೇಳಿದ್ದಾರೆ.