ಬೆಂಗಳೂರು : ವಿದ್ಯುತ್ ದರ ಹೆಚ್ಚಳ ಮಾಡುವುದು ಸರ್ಕಾರವಲ್ಲ. ಕೆಇಆರ್ಸಿ ಈ ನಿರ್ಧಾರ ಮಾಡಲಿದೆ ಎಂದು ವಿದ್ಯುತ್ ದರ ಏರಿಕೆ ಕುರಿತು ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯುತ್ ದರ ಹೆಚ್ಚಳ ಸಂಬಂಧ ಎಲ್ಲಾ ಎಸ್ಕಾಂಗಳು ಕೆಇಆರ್ಸಿ ಮುಂದೆ ಹೋಗೋದು ಸಹಜ. ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ 2013-14ರಲ್ಲಿ ನಿರ್ಧಾರ ತೆಗೆದುಕೊಂಡಿದ್ರು. ಕಲ್ಲಿದ್ದಲು, ಆಯಿಲ್ ದರ ಹೆಚ್ಚಾದಾಗ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದ ಬಗ್ಗೆ ನಿರ್ಧಾರ ಮಾಡಿದ್ರು.
ದರ ಹೆಚ್ಚಳವಾದಾಗ ಸರಿದೂಗಿಸೋ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರು. ಅಂದಿನಿಂದ ಈವರೆಗೂ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡುತ್ತಾ ಬರಲಾಗುತ್ತಿದೆ. ಇಲ್ಲಿ ಸರ್ಕಾರದಿಂದ ಯಾವುದೇ ದರ ಹೆಚ್ಚಳ ಮಾಡಿಲ್ಲ. ಇಂಧನ ದರ ಪರಿಷ್ಕರಣೆಯನ್ನು ಕೆಇಆರ್ಸಿ ಮಾಡಿದೆ ಎಂದು ಹೇಳಿದರು.
ಹೇಯ ಕೃತ್ಯ: ನಿನ್ನೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ಅತ್ಯಂತ ಹೇಯ ಕೃತ್ಯ. ಅವರ ಸಾವಿಗೆ ಸಂತಾಪ ಸೂಚಿಸುವುದಾಗಿ ಹೇಳಿದರು. ಒಂದು ಪೋಸ್ಟರ್ ಹೇಳಿಕೆ ಭೀಭತ್ಸ ಘಟನೆಗೆ ಕಾರವಾಗಿದೆ. ಇಸ್ಲಾಂನ ಭಯೋತ್ಪಾದನೆಯ ಮುಂದುವರಿದ ಭಾಗ ಇದು. ಕಾಶ್ಮೀರದಲ್ಲಿ ಬೆಲೆ ತೆತ್ತಬೇಕಾಯ್ತು. ಕೇರಳದಲ್ಲಿ, ಕರ್ನಾಟಕದಲ್ಲಿ ಆಗಿತ್ತು. ಇಂದು ರಾಜಸ್ಥಾನದಲ್ಲಿ ಆಗಿದೆ. ಇಸ್ಲಾಂ ಕುರಿತ ಹೇಳಿಕೆ ಕುತ್ತಿಗೆ ಕಡಿಯೋ ಮಟ್ಟಿಗೆ ಆಗಿದೆ. ಇದರ ಹಿಂದೆ ಒಬ್ಬರಲ್ಲ, ಅನೇಕರು ಇದ್ದಾರೆ. ಇದನ್ನು ಕಾನೂನು ನೋಡಿಕೊಳ್ಳಲಿದೆ ಎಂದರು.
ಲಘುವಾಗಿ ಖಂಡಿಸೋ ಕೆಲಸ ಕಾಂಗ್ರೆಸ್ ಮತ್ತು ಇತರೆ ಪಕ್ಷ ಮಾಡಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಎದೆ ನಡುಗಿತು ಎಂದಿದ್ದಾರೆ. ಇದು ಕೇವಲ ಟ್ವೀಟ್ನಲ್ಲಿ ಮಾತ್ರನಾ ಅಂತಾ ಗೊತ್ತಿಲ್ಲ. ಹಿಂದೆ ಇಲ್ಲಿ ಅನೇಕ ಹಿಂದೂ ಯುವಕರ ಹತ್ಯೆ ಆದಾಗ ಎಂದೂ ಇವರಿಗೆ ಎದೆ ನಡುಗಲಿಲ್ಲ.
ನಾನು ರಾಜಕಾರಣ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು. ಈ ಘಟನೆ ಧಿಡೀರ್ ಆಗಿಲ್ಲ. ಅಲ್ಲಿನ ಸರ್ಕಾರ ಏಕೆ ಬಿಗಿಯಾಗಿ ತೆಗೆದುಕೊಳ್ಳಲಿಲ್ಲ. ಇದರಲ್ಲೂ ತುಷ್ಟೀಕರಣದ ರಾಜಕಾರಣ ಇರಬಹುದು. ಇದರ ಹಿಂದೆ ಸಾವಿರಾರು ಜನರ ಕೈವಾಡ ಇದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆದರಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ.. ರಾಜಸ್ಥಾನ ಸರ್ಕಾರ ವಜಾಗೊಳಿಸುವಂತೆ ಕಟೀಲ್ ಆಗ್ರಹ
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನವರಿಗೆ ಕಲ್ಲಂಗಡಿ ಘಟನೆ ಆದಾಗ ಮನ ಕರಗುತ್ತದೆ. ರಕ್ತದೋಕುಳಿ ಆದಾಗ ಅವರು ಉಸಿರು ಎತ್ತೋದಿಲ್ಲ. ಹರ್ಷ ಕೊಲೆ ಆದಾಗ ಅವರಿಗೆ ಏನೂ ಅನಿಸಲಿಲ್ಲ. ಈ ಕತ್ತಿ ಎಲ್ಲರ ಕುತ್ತಿಗೆಗೂ ಬರಲಿದೆ ಅನ್ನೋದು ಅವರಿಗೂ ಗೊತ್ತಾಗಿದೆ. ಇಂಥವರಿಗೆ ಇಲ್ಲಿ ಇರಲು ಅವಕಾಶ ನೀಡಬೇಕಾ? ಎಂದು ಪ್ರಶ್ನಿಸಿದರು.