ಬೆಂಗಳೂರು: ಕೆಆರ್ ಪುರ ಸರ್ಕಾರಿ ಆಸ್ಪತ್ರೆಗೆ ತುರ್ತಾಗಿ 10 ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಕೆಆರ್ ಪುರ ಸರ್ಕಾರಿ ಆಸ್ಪತ್ರೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಈಗಾಗಲೇ ಆರು ವೆಂಟಿಲೇಟರ್ಗಳನ್ನು ನೀಡಿದ್ದು, ಇನ್ನು ನಾಲ್ಕು ವೆಂಟಿಲೇಟರ್ ಅವಶ್ಯಕತೆ ಬಗ್ಗೆ ಮನವಿ ಮಾಡಿದ್ದಾರೆ, ಆದಷ್ಟು ಬೇಗ ನೀಡುತ್ತೇವೆ ಎಂದು ಹೇಳಿದರು.
ಕೆಆರ್ ಪುರ ಸರ್ಕಾರಿ ಆಸ್ಪತ್ರೆ 100 ಹಾಸಿಗೆಯ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ 50 ಹಾಸಿಗೆ ಆಕ್ಸಿಜನ್ ಬೆಡ್ ಗಳನ್ನ ಬಳಕೆಗೆ ಸೂಚಿಸಲಾಗಿದೆ ಎಂದರು. ಕೆಲ ತಾಂತ್ರಿಕ ದೋಷದ ಹಿನ್ನೆಲೆ ಇಲ್ಲಿ ವೆಂಟಿಲೇಟರ್ ಸಮಸ್ಯೆ ಆಗಿದ್ದು, ಇನ್ನೆರಡು ಮೂರು ದಿನದಲ್ಲಿ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಬೇಜವಾಬ್ದಾರಿ ಕೆಲಸ ಕಂಡು ಕೆಲ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಒಂದು ವರ್ಷದ ಹಿಂದೆ ನೀಡಿದ್ದ ಆರು ವೆಂಟಿಲೇಟರ್ ಗಳನ್ನ ಉಪಯೋಗಿಸದೇ ಇರುವುದನ್ನ ಕಂಡು ಕೆಂಡಾಮಂಡಲರಾದರು.
ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನ್ ಬೆಡ್ಗಳನ್ನು ಕೊರೊನಾ ಸೋಂಕಿತ ರೋಗಿಗಳಿಗೆ ಮೀಸಲಿಡಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಯಲಹಂಕ, ಕೆಆರ್ ಪುರ ಆನೇಕಲ್ ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಲವತ್ತು ಬೆಡ್ ಗಳನ್ನ ಮಾತ್ರ ರೆಡಿ ಮಾಡಲಾಗಿತ್ತು. ಇದರಿಂದ ಮತ್ತಷ್ಟು ಅಧಿಕಾರಿಗಳ ಮೇಲೆ ಕಿಡಿಕಾರಿದರು. ಕೂಡಲೇ ಬಾಕಿ ಇರುವ ಬೆಡ್ ಗಳನ್ನ ಸಿದ್ದಪಡಿಸುವಂತೆ ತಿಳಿಸಿದರು.
ನಂತರ ಕೊರೊನಾ ಎರಡನೇ ಅಲೆ ಆರಂಭದಿಂದ ಸುಮಾರು 40 ಸೋಂಕಿತರು ಸಾವನ್ನಪ್ಪಿರುವುದರ ಬಗ್ಗೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಏಕೆ ಇಷ್ಟು ಜನ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೆಡಿಕಲ್ ಆಫೀಸರ್ ಬಳಿ ಕಾರಣವನ್ನ ಕೇಳಿದರು. ಇನ್ನು ಮುಂದೆ ಸಾವುಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಖಡಕ್ ಆಗಿ ಹೇಳಿದರು.
ಹೊಸಕೋಟೆ ಎಂವಿಜೆ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಭೇಟಿ:
ಕೆಆರ್ ಪುರ ನಂತರ ಹೊಸಕೋಟೆಯ ಎಂವಿಜೆ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ಎಂವಿಜೆ ಆಸ್ಪತ್ರೆ ಬೆಡ್ ಬುಕ್ಕಿಂಗ್ ಮತ್ತು ರೋಗಿಗಳ ಆರೈಕೆ ಊಟದ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ನಂತರ ಆಕ್ಸಿಜನ್ ಕೊರತೆ ಇರುವುದನ್ನ ಸಚಿವರ ಗಮನಕ್ಕೆ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ಆದಷ್ಟು ಬೇಗ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ತಿಳಿಸಿದರು. ರೋಗಿಗಳು ಯಾವುದೇ ಕಾರಣಕ್ಕೂ ಚಿಕಿತ್ಸೆ ಬಗ್ಗೆ ದೂರುಗಳು ಹೇಳಬಾರದು ಉತ್ತಮ ಗುಣಮಟ್ಟದ ಆರೈಕೆ ಮಾಡಬೇಕು. ಸರ್ಕಾರದಿಂದ ಯಾವುದೇ ನೆರವು ನೀಡಲು ಸಿದ್ದರಿದ್ದೇವೆ ಸಾವುಗಳ ಸಂಖ್ಯೆ ಕಡಿಮೆ ಮಾಡಬೇಕು ಉತ್ತಮ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.