ಬೆಂಗಳೂರು: ನಾಳೆ ಬೆಂಗಳೂರಿನ ಸಂಸದರು, ಶಾಸಕರ ಜೊತೆ ಸಭೆ ನಡೆಸಲಿದ್ದೇವೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಸಮಗ್ರವಾಗಿ ಚರ್ಚಿಸಿ ನಂತರ ಯಾವ ರೀತಿ ಟಫ್ ರೂಲ್ಸ್ ಜಾರಿಗೊಳಿಸಬೇಕು ಎಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗು ಆರೋಗ್ಯ ಸಚಿವ ಸುಧಾಕರ್ ಸಭೆ ನಡೆಸಿದರು.
ನಾಳೆ ವಿಧಾನಸೌಧದಲ್ಲಿ ಬೆಂಗಳೂರು ಸಂಸದರು, ಶಾಸಕರ ಸಭೆ ನಡೆಸುವ ಸಂಬಂಧ ಪೂರ್ವಭಾವಿ ಸಭೆ ನಡೆಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಗೃಹಸಚಿವ ಬಸವರಾಜ್ ಬೊಮ್ಮಯಿ, ಕಂದಾಯ ಸಚಿವ ಆರ್.ಅಶೋಕ್ ಜೊತೆ ಸಭೆ ಮಾಡಿದ್ದೇವೆ. ನಾಳೆಯ ಸಭೆಯ ಪೂರ್ವಭಾವಿಯಾಗಿ ಇಂದು ಅಧಿಕಾರಿಗಳ ಜೊತೆ ಸಭೆ ಮಾಡಲಾಯಿತು. ಬೆಂಗಳೂರು ಪರಿಸ್ಥಿತಿ, ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಲಾಯಿತು ಎಂದರು.
ನಾಳೆ ಬೆಂಗಳೂರು ಸಂಸದರು, ಶಾಸಕರ ಜೊತೆ ಸಮಗ್ರವಾಗಿ ಸಭೆ ಮಾಡುತ್ತೇವೆ. ಅದರಲ್ಲಿ ಅಭಿಪ್ರಾಯ ಸಂಗ್ರಹಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಂತಿಮವಾಗಿ ಸಿಎಂ ನಿರ್ದೇಶನ ಮುಖ್ಯ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮತ್ತು ನಿರ್ದೇಶನ ಪಾಲಿಸುತ್ತೇವೆ.
ಇದು ಸಾಂಕ್ರಾಮಿಕ ರೋಗ. ಬೇರೆ ಬೇರೆ ದೇಶದಲ್ಲಿ ಯಾವ ಕ್ರಮ ತೆಗೆದುಕೊಂಡಿದ್ದಾರೆ. ಸೋಂಕು ನಿಯಂತ್ರಿಸಲು ಏನೆಲ್ಲಾ ಕ್ರಮ ತೆಗೆದುಕೊಂಡಿದ್ದಾರೆ ಎಂದು ಗಮನಿಸಿದ್ದೇವೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸರ್ಕಾರಕ್ಕೆ ಬೆಡ್ ನೀಡದ ಖಾಸಗಿ ಆಸ್ಪತ್ರೆಗೆ ವಿರುದ್ಧ ಕ್ರಮ:
ಶೇ. 50ರಷ್ಟು ಹಾಸಿಗೆಯನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಸರ್ಕಾರಕ್ಕೆ ನೀಡುವಂತೆ ಸೂಚಿಸಲಾಗಿದೆ. ಆದರೆ ಈ ವಿಚಾರದಲ್ಲಿ ಖಾಸಗಿ ಆಸ್ಪತ್ರೆ ಕ್ರಮ ಸರಿ ಎನಿಸಿಲ್ಲ. ಬೆಡ್ ನೀಡುವುದರಲ್ಲಿ ಸಮಾಧಾನ ತರಿಸಿಲ್ಲ. ಇಂದಿನಿಂದ ಕ್ರಮ ಜರುಗಿಸಲು ಸಿದ್ಧರಾಗಿದ್ದೇವೆ ಎಂದು ಬೆಡ್ ನೀಡದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.
ಡಿ.ಕೆ.ಶಿವಕುಮಾರ್ಗೆ ಸುಧಾಕರ್ ಟಾಂಗ್:
ಅತಿ ಹೆಚ್ಚು ಮಾನವಸಂಪನ್ಮೂಲ ಇರುವುದು ಶಿಕ್ಷಣ ಇಲಾಖೆಯಲ್ಲಿ. ಆರೋಗ್ಯ ಇಲಾಖೆ ಎರಡನೇಯದ್ದು. ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಾನು ಕರೆಕ್ಷನ್ ಮಾಡುತ್ತೇನೆ. ಅವರಿಗೆ ಮಾಹಿತಿ ಕಳಿಸಿಕೊಡ್ತೇನೆ ಎಂದು ಮಾನವಸಂಪನ್ಮೂಲ ಬಳಕೆ ಬಗ್ಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ಗೆ ಸುಧಾಕರ್ ಟಾಂಗ್ ನೀಡಿದರು.