ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಕರ್ತವ್ಯ ಕಾಲದ ಅಭಿವೃದ್ಧಿಯ ಅಮೃತವನ್ನು ಎಲ್ಲಾ ವರ್ಗಗಳ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಯಶಸ್ವಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ಮೂಲಕ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಏಷ್ಯಾದಲ್ಲಿಯೇ ಅತಿ ದೊಡ್ಡ 2ನೇ ರೇಷ್ಮೆ ಮಾರುಕಟ್ಟೆಯನ್ನು ಶಿಡ್ಲಘಟ್ಟ ಹೊಂದಿದೆ. ಇಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸಲಾಗುತ್ತದೆ. ಇದು ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೇಷ್ಮೆ ಬೆಳೆಗಾರರಿಗೆ ಸಂಭ್ರಮ ತಂದಿದೆ. 32 ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂ, ಶ್ರೆಡ್ಡರ್ಸ್‌ಗಳಿಗಾಗಿ 12 ಕೋಟಿ ರೂ, ಹೀಗೆ ಮೊದಲಾದ ನೆರವು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ರೇಷ್ಮೆ ಬೆಳೆಗಾರರ ಬದುಕಿಗೆ ಸುಧಾರಣೆಯ ಹೊಸ ನೋಟ ನೀಡಿದ ಮುಖ್ಯಮಂತ್ರಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ದ್ರಾಕ್ಷಿ ಬೆಳೆಗಾರರ ನೆರವಿಗೆ ದ್ರಾಕ್ಷಾರಸ ಮಂಡಳಿಯ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇದು ಕೂಡ ಚಿಕ್ಕಬಳ್ಳಾಪುರ ಭಾಗದ ದ್ರಾಕ್ಷಿ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ ಪೂರಕ ಬಜೆಟ್- ಕಟೀಲ್: ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ 2023-24ನೇ ಸಾಲಿನ ರಾಜ್ಯ ಆಯವ್ಯಯ ಪತ್ರವನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಕೋವಿಡ್ ನಂತರದ ದಿನಗಳಲ್ಲಿ ಜಾಗತಿಕ ಚೇತರಿಕೆಗಿಂತ ತೀವ್ರಗತಿಯಲ್ಲಿ ಭಾರತ ಪುಟಿದೆದ್ದಿದೆ. ಇದೇ ಹಾದಿಯಲ್ಲಿ ಕರ್ನಾಟಕವೂ ದೃಢವಾಗಿ ಮುನ್ನಡೆಯುತ್ತಿದೆ. ಈ ಆಯವ್ಯಯವು ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಉಜ್ವಲ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಠಾಗೊಳಿಸುತ್ತಿರುವ ಸಾರ್ಥಕ ಭಾವದೊಂದಿಗೆ, ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ನಮ್ಮ ಕರ್ತವ್ಯಗಳು, ಗುರಿಗಳು ಹಾಗೂ ಫಲಿತಾಂಶಗಳ ದೂರದೃಷ್ಟಿಯೊಂದಿಗೆ ಈ ಆಯವ್ಯಯವನ್ನು ಮುಖ್ಯಮಂತ್ರಿಯವರು ಮಂಡಿಸಿದ್ದಾರೆ. ಅಲ್ಲದೆ, ಅದರ ಅನುಷ್ಠಾನದ ಕುರಿತು ಸ್ಪಷ್ಟತೆಯನ್ನೂ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಕ್ರಾಂತಿಕಾರಿ ಬದಲಾವಣೆಯ ಸೂಚಕ: ಸಿ.ಸಿ.ಪಾಟೀಲ್: ರಾಜ್ಯದ ಭವಿಷ್ಯದ ಕ್ರಾಂತಿಕಾರಿ ಬದಲಾವಣೆಗೆ ಈ ಬಾರಿಯ ಬಜೆಟ್ ಸೂಚಕವಾಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಸದೃಢವಾಗಿ ಬೆಳವಣಿಗೆ ಕಂಡಿರುವುದು ಮತ್ತು ರಾಜಸ್ವ ಸಂಗ್ರಹಣೆಯಲ್ಲಿ ಹೆಚ್ಚಳವಾಗಿರುವುದು ಇಡೀ ನಾಡಿನ ಸಮಗ್ರ ಬೆಳವಣಿಗೆಗೆ ಮೂಲಾಧಾರವಾಗಲಿದೆ. ನಮ್ಮ ಸರ್ಕಾರದ ಸಮರ್ಥ ಆಡಳಿತಕ್ಕೆ ಮತ್ತು ಮುಖ್ಯಮಂತ್ರಿಗಳ ದಕ್ಷ ನಾಯಕತ್ವಕ್ಕೆ ಇದು ನಿದರ್ಶನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಲೋಕೋಪಯೋಗಿ ಇಲಾಖೆಗೆ ಕಳೆದ ಬಾರಿಗಿಂತ ಈ ಮುಂಗಡ ಪತ್ರದಲ್ಲಿ ಹೆಚ್ಚಿನ ಅನುದಾನವನ್ನು (ರೂ.10.741 ಕೋಟಿ) ಮೀಸಲಿಟ್ಟಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗದ ಮೂಲ ಸೌಲಭ್ಯಗಳ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ರಸ್ತೆ, ಹೆದ್ದಾರಿ, ಸೇತುವೆ ಮುಂತಾದ ಸೌಲಭ್ಯಗಳ ಹೆಚ್ಚಳಕ್ಕೆ ಮುಖ್ಯಮಂತ್ರಿಗಳು ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯದ ಅನೇಕ ರಸ್ತೆ, ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಸೇತುವೆಗಳ ನಿರ್ಮಾಣ ಯೋಜನೆ ಪೂರ್ಣಗೊಂಡಿರುವುದು ಈ ಬಜೆಟ್ನಲ್ಲಿ ಬಿಂಬಿತವಾಗಿದೆ. ಅಷ್ಟೇ ಅಲ್ಲ ರಾಜ್ಯದ 1,008 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳ ನವೀಕರಣಕ್ಕಾಗಿ 440 ಕೋಟಿ ರೂ. ಅನುದಾನದ ಯೋಜನೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಜನಪರ ಬಜೆಟ್- ಆರಗ ಜ್ಞಾನೇಂದ್ರ: ಇಡೀ ವಿಶ್ವವೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನುರಿತ ಆಡಳಿತ ಅನುಭವವಿರುವ ಬಸವರಾಜ್ ಬೊಮ್ಮಾಯಿ ಅವರು ಅತ್ಯಂತ ಜನಪರ ಹಾಗೂ ಸಮತೋಲನದ ಮಿಗತೆ ಆಯವ್ಯಯವನ್ನು ಸದನದಲ್ಲಿ ಮಂಡಿಸಿದ್ದಾರೆ. ಮಲೆನಾಡು ಪ್ರದೇಶದಲ್ಲಿ, ಕಾಣೆ, ಬಾಣೆ, ಸೊಪ್ಪಿನ ಬೆಟ್ಟ, ಹುಲ್ಲುಬನ್ನಿ ಹಾಗೂ ಸರ್ಕಾರಿ ಬೀಳು, ಒಳಗೊಂಡಂತೆ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ, ಸಾವಿರಾರು, ಬಡವರು ಹಾಗೂ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ, ಬಗರ್ ಹುಕುಂ ಜಮೀನನ್ನು ಮಂಜೂರು ಮಾಡಲು, ಮುಖ್ಯಮಂತ್ರಿಯವರು ಇಂದು ಮಂಡಿಸಿದ ಆಯವ್ಯಯದಲ್ಲಿ ಭರವಸೆ ನೀಡಿದ್ದು, ಈ ಬಜೆಟ್ ಅನ್ನು ಸ್ವಾಗತಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಅಮೃತ ಕಾಲದ ಬಜೆಟ್- ಸುನಿಲ್ ಕುಮಾರ್: ರಾಜಸ್ವ ವೆಚ್ಚ, ಬಂಡವಾಳ ವೆಚ್ಚ ಹಾಗೂ ಸಾಲ ಮರುಪಾವತಿ ಸೇರಿದಂತೆ 3 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ವಿತ್ತೀಯ ಹೊಣೆಗಾರಿಕೆ ಮಿತಿಯಲ್ಲೇ ರಾಜಸ್ವ ಹೆಚ್ಚಳದ ಬಜೆಟ್ ಮಂಡನೆ ಮೂಲಕ ಬೊಮ್ಮಾಯಿ ಸೈ ಎನಿಸಿಕೊಂಡಿದ್ದಾರೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೊಮ್ಮಾಯಿ ಜೋಳಿಗೆಯಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಸಿಕ್ಕಿದ್ದೇನು..?