ಬೆಂಗಳೂರು: ಕೊರೊನಾ ಹೊಸ ರೂಪಾಂತರ ನೆರೆ ರಾಜ್ಯಕ್ಕೆ ಕಾಲಿಟ್ಟಿದ್ದು, ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಂಜಾಗರೂಕತಾ ದೃಷ್ಟಿಯಿಂದ ನೈಟ್ ಕರ್ಫ್ಯೂ ವಿಧಿಸುವ ಬಗ್ಗೆ ಮುನ್ಸೂಚನೆಯನ್ನು ಆರೋಗ್ಯ ಸಚಿವ ಡಾ.ಸುಧಾಕರ್ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯ. ಅವರ ರಕ್ಷಣೆಗಾಗಿ ನೈಟ್ ಕರ್ಪ್ಯೂ ಜಾರಿಗೆ ತರುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಕೇಂದ್ರ ಆರೋಗ್ಯ ಸಚಿವಾಲಯ ನೈಟ್ ಕರ್ಪ್ಯೂ ವಿಧಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಮಹಾರಾಷ್ಟ್ರ ಈಗಾಗಲೇ ಜಾರಿ ಮಾಡಿದೆ ಎಂದರು.
ಜನವರಿಯಿಂದ ಶಾಲೆ ಆರಂಭ ಡೌಟ್?
ಜನವರಿ ಒಂದರಿಂದ ಶಾಲೆ ಆರಂಭ ವಿಚಾರದಲ್ಲಿ ಸಿದ್ಧತೆ ಆರಂಭಗೊಂಡಿದೆ. ಆದರೆ ಕೊರೊನಾ ಹೊಸ ರೂಪಾಂತರ ಹಿನ್ನೆಲೆಯಲ್ಲಿ ಜನವರಿ ಒಂದರಿಂದ ಶಾಲೆ ಆರಂಭಿಸಬೇಕೇ?, ಬೇಡವೇ ಎಂಬ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ವರದಿ ಕೇಳಿದ್ದೇವೆ. ಇಂದೇ ವರದಿ ನೀಡಲಿದ್ದಾರೆ. ಈ ವರದಿ ನೀಡಿದ ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
'ಲಾಕ್‌ಡೌನ್ ಇಲ್ಲ'
ಸದ್ಯಕ್ಕೆ ಲಾಕ್‌ಡೌನ್ ಬಗ್ಗೆ ಚಿಂತನೆ ಇಲ್ಲ.ಈಗಾಗಲೇ ಕೊರೊನಾ ನೆಗೆಟಿವ್ ವರದಿ ಇಲ್ಲದೆ ಬಂದಿರುವ 138 ಮಂದಿಯನ್ನು ಪತ್ತೆ ಹಚ್ಚುವ ಕೆಲಸ ಆಗಿದೆ. ಪತ್ತೆಯಾದವನ್ನು ಕ್ವಾರಂಟೈನ್ ಮಾಡಿದ್ದಾರೆ. ಈಗಾಗಲೇ ಆರ್‌ಟಿ- ಪಿಸಿಆರ್ ಟೆಸ್ಟ್ ಮಾಡಿಸಿರುವವರ ರಿಪೋರ್ಟ್ ಇಂದು ಸಂಜೆ ಬರಬಹುದು. ವರದಿಯಲ್ಲಿ ಪಾಸಿಟಿವ್ ಬಂದರೆ ಜೆನೆಸಿಸ್ ಪರೀಕ್ಷೆ ಮಾಡಿ, ಆ ವೈರಸ್ ಬಗ್ಗೆ ತಿಳಿದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಸುಧಾಕರ್ ತಿಳಿಸಿದರು.