ಬೆಂಗಳೂರು: "ನಮ್ಮ ರಾಜ್ಯದ ಆರೋಗ್ಯ ಕಾರ್ಡ್ ಇಡೀ ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಮಾನ್ಯತೆ ಪಡೆದಿದೆ. ಕಾರ್ಡ್ ಹೊಂದಿದ ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಆದರೆ ರೆಫರಲ್ ವ್ಯವಸ್ಥೆ ತೆರವು ಮಾಡಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಮೊದಲು ಚಿಕಿತ್ಸೆ ಪಡೆಯುವುದು ಕಡ್ಡಾಯ" ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, "ರೋಗಿಗಳ ಸರದಿ ಸಾಲು ತಪ್ಪಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಮಾಡಲಾಗಿದೆ. ದಿನದ 24 ಗಂಟೆಯೂ ಕೆಲಸ ಮಾಡಲಾಗುತ್ತದೆ. ರೋಗಿಗಳಿಗೆ ಅಗತ್ಯ ಸಲಹೆ ನೀಡಿ ತಜ್ಞ ವೈದ್ಯರ ಬಳಿ ಕಳಿಸಲಾಗುತ್ತದೆ. ರೋಗಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ".
"ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಎರಡರ ಕೋ ಬ್ರ್ಯಾಂಡ್ ಕಾರ್ಡ್ ನಾವು ವಿತರಿಸುತ್ತಿದ್ದೇವೆ. 1.78 ಕೋಟಿ ಕಾರ್ಡ್ ಕೊಡಲಾಗಿದೆ. ಇಡೀ ದೇಶದ ಯಾವುದೇ ರಾಜ್ಯ, ಯಾವುದೇ ಆಸ್ಪತ್ರೆಗೆ ಹೋದರೂ ಈ ಕಾರ್ಡ್ ಮಾನ್ಯವಿರಲಿದೆ. ರೆಫರೆಲ್ ವ್ಯವಸ್ಥೆ ತೆಗೆದು ಹಾಕಿದರೆ ಎಲ್ಲಾ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಇದರಿಂದ ನಮ್ಮ ಸರ್ಕಾರಿ ಆಸ್ಪತ್ರೆ ಬೇಡಿಕೆ ಕಡಿಮೆಯಾಗಲಿದೆ. ಹಾಗಾಗಿ, ಅದನ್ನು ಮಾಡಲು ಸಾಧ್ಯವಿಲ್ಲ, ಆದರೆ ಸುಧಾರಣೆ ಮಾಡೋಣ. ಇನ್ನು ಮೂರು ತಿಂಗಳಿನ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತದೆ."
"ಖಾಸಗಿ ಆಸ್ಪತ್ರೆಗಳಲ್ಲಿ ನಮ್ಮ ಆರೋಗ್ಯ ವಿಮೆ ಯೋಜನೆಗೆ ಪ್ಯಾಕೇಜ್ ಕಡಿಮೆ ಎಂದು ಒಪ್ಪುತ್ತಿಲ್ಲ ಎನ್ನುವ ಆರೋಪಗಳಿವೆ, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಆದರೆ ತುರ್ತು ಸ್ಥಿತಿಯಲ್ಲಿ ರೆಫರೆನ್ಸ್ ಕಡ್ಡಾಯವಿಲ್ಲ, ಅಪಘಾತ ಇತ್ಯಾದಿ ವೇಳೆ ಹತ್ತಿರದ ಯಾವುದೇ ಆಸ್ಪತ್ರೆಗೆ ಬೇಕಾದರೂ ದಾಖಲಿಸಬಹುದು, ಯಾವುದೇ ಆಸ್ಪತ್ರೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಖಾಸಗಿ ಆಸ್ಪತ್ರೆಗೆ ಸರ್ಕಾರದಿಂದ ಪಾವತಿ ಮಾಡಬೇಕಾದ ಪೇಮೆಂಟ್ ಸಮಸ್ಯೆ ಇಲ್ಲ, ಒಂದು ತಿಂಗಳಿನಲ್ಲೇ ಸರ್ಕಾರ ಖಾಸಗಿ ಆಸ್ಪತ್ರೆಗೆ ಹಣ ಪಾವತಿ ಮಾಡುತ್ತದೆ" ಎಂದರು.
ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿ, "39 ಲಕ್ಷ ಜನರಿಗೆ ಆರೋಗ್ಯ ಸೇವೆ ಸಿಕ್ಕಿದೆ. ಎರಡನೇ ಹಂತದಲ್ಲಿ ಶೇ. 20 ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿದೆ. ಬಿಪಿಎಲ್ಗೆ 5 ಲಕ್ಷ ಹಾಗೂ ಎಪಿಎಲ್ ಗೆ 1.5 ಲಕ್ಷ ರೂ.ವೆಚ್ಚದ ಚಿಕಿತ್ಸೆ ಲಭಿಸಲಿದೆ. ಅಮೆರಿಕದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದರೆ ಅಲ್ಲಿ ದಾಖಲೆ ಇರುವುದಿಲ್ಲ. ಆದರೆ, ನಮ್ಮ ಕಾರ್ಡ್ ಕಾಶ್ಮೀರಕ್ಕೆ ಹೋದರೂ ಮಾನ್ಯತೆ ಇದೆ, ರೋಗ ಮತ್ತು ವಿಳಾಸದ ಸಂಪೂರ್ಣ ಮಾಹಿತಿ ಅದರಲ್ಲೇ ಲಭ್ಯವಿರಲಿದೆ. ಇನ್ನು ಮೂರು ತಿಂಗಳಿನಲ್ಲಿ ಬಾಕಿ ಇರುವ ಆರೋಗ್ಯ ಕಾರ್ಡ್‌ಗಳನ್ನು ಸಂಪೂರ್ಣವಾಗಿ ಕೊಡುವ ಗುರಿ ಹಾಕಿಕೊಳ್ಳಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಕಾರವಾರ: ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ
ಬ್ರಿಮ್ಸ್ ಕಟ್ಟಡದ ವಿಚಾರ: "ಬೀದರ್ ಜಿಲ್ಲೆಯ ಬ್ರಿಮ್ಸ್ ಕಟ್ಟಡ 2017ರಲ್ಲಿ ಮುಕ್ತಾಯವಾದರೂ ಇನ್ನೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರವಾಗಿಲ್ಲ. ಕಟ್ಟಡ ಸೋರುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಇದೇ ವೇಳೆ ಡಾ.ಸುಧಾಕರ್ ಹೇಳಿದರು.
ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಬೀದರ್ನಲ್ಲಿ 2013-14 ರಲ್ಲಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಆದರೆ ನಮ್ಮ ವೈದ್ಯಕೀಯ ಶಿಕ್ಷಣ ಇಲಾಖೆಗೆ ಇನ್ನೂ ಹಸ್ತಾಂತರ ಮಾಡಿಲ್ಲ, ಮೊದಲ ಮತ್ತು ಎರಡನೇ ಮಹಡಿಯಲ್ಲಿ ಲೀಕೇಜ್ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಎಲ್ಲಾ ಕಾಮಗಾರಿ ಬಗ್ಗೆ ಸರಿಪಡಿಸಬೇಕು, ಗುಣಮಟ್ಟದಲ್ಲಿ ರಾಜಿ ಇಲ್ಲ, ಎಷ್ಟೇ ದೊಡ್ಡ ಗುತ್ತಿಗೆದಾರ ಆದರೂ ಕ್ರಮ ಖಚಿತ. ಮತ್ತೆ ಅವರಿಗೆ ಗುತ್ತಿಗೆ ನೀಡಲ್ಲ" ಎಂದರು.
ಇದನ್ನೂ ಓದಿ: ಎಲ್ಲಿಯೂ ಆಯುಷ್ಮಾನ್ ಆರೋಗ್ಯ ಕಾರ್ಡ್ ವರ್ಕ್ ಆಗ್ತಿಲ್ಲ: ಶಾಸಕ ಹ್ಯಾರಿಸ್ ಆಕ್ರೋಶ
ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, "ವಿಜಯಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಸಿಗೆ ಸಾಮರ್ಥ್ಯ 100 ರಿಂದ 150 ಕ್ಕೆ ಹೆಚ್ಚಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಏಪ್ರಿಲ್ನಲ್ಲಿ ಕಟ್ಟಡ ಉದ್ಘಾಟನೆ ಮಾಡಲಾಗುತ್ತದೆ. ಇನ್ನೂ 50 ಹಾಸಿಗೆ ಅಗತ್ಯವಿದೆಯಾ? ಎನ್ನುವುದನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುತ್ತದೆ" ಎಂದು ತಿಳಿಸಿದರು.
ಆಯುಷ್ ಸೇವೆ ಸುಧಾರಣೆ: "ಆಯುಷ್ನಲ್ಲಿ 15 ವರ್ಷ ಸೇವೆ ಮಾಡಿದ್ದರೆ ಅವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ. ಆಯಷ್ನಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ. ಅದನ್ನು ಮಾಡಲಿದ್ದೇವೆ" ಎಂದು ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದರು.