ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ಸದಾಶಿವ ನಗರದ ಮನೆಯ ಸುತ್ತಮುತ್ತ ಹಾಗೂ ಮನೆ ಮುಂದಿನ ರಸ್ತೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.
ಸಚಿವರ ಪತ್ನಿ ಹಾಗೂ ಮಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ, ಅಕ್ಕಪಕ್ಕದ ಮನೆ ಕಂಪೌಂಡ್ ಬಳಿಯೂ ರಾಸಾಯನಿಕ ಸಿಂಪಡಿಸಲಾಗಿದ್ದು, ಮನೆ ಮುಂದಿನ ರಸ್ತೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಸಚಿವರ ಮನೆ ಕೆಲಸದವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ನಿನ್ನೆ ಬೆಳಗ್ಗೆ ಸುಧಾಕರ್ ಅವರ 82 ವರ್ಷ ತಂದೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಹಿನ್ನೆಲೆಯಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನು ಮನೆಯವರೆಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿದ್ದು, ಸುಧಾಕರ್ ಅವರ ಪತ್ನಿ ಮತ್ತು ಮಗಳಿಗೆ ಸೋಂಕು ತಗುಲಿದ್ದು, ಸಚಿವ ಸುಧಾಕರ್ ಹಾಗೂ ಅವರ ಇಬ್ಬರು ಗಂಡು ಮಕ್ಕಳ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಅವರ ಮನೆ ಮುಂದಿನ ರಸ್ತೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.