ಬೆಂಗಳೂರು : ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ ಗ್ರಾಮೀಣ ಮೂಲಸೌಕರ್ಯಕ್ಕೆ ಒತ್ತು ನೀಡುವ ಜನಪರ ಬಜೆಟ್ ಇದಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಸಚಿವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಬಜೆಟ್ ಇದಾಗಿದೆ. ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸುವಂತಹ ಬಜೆಟ್ನಲ್ಲಿ ಉದ್ಯೋಗ ಸೃಷ್ಟಿ, ಬಂಡವಾಳ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಸಹಕಾರ ಸಂಘಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಪ್ರಸ್ತುತ ಸಹಕಾರ ಸಂಘಗಳು ಪಾವತಿಸುತ್ತಿದ್ದ 18% ತೆರಿಗೆಯನ್ನು 15%ಗೆ ಇಳಿಕೆ ಮಾಡಿದೆ.
ಒಂದು ಕೋಟಿಗಿಂತ ಹೆಚ್ಚು ಮತ್ತು 10 ಕೋಟಿ ರೂ.ವರೆಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್ ಚಾರ್ಜ್ ಅನ್ನು 12% ನಿಂದ 7%ಗೆ ಇಳಿಕೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.
ಇದರಿಂದಾಗಿ ಸಹಕಾರ ಸಂಘಗಳು ಮತ್ತು ಸಂಘದ ಸದಸ್ಯರುಗಳ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಬಹುಪಾಲು ಸದಸ್ಯರು ಗ್ರಾಮೀಣ ಭಾಗದವರಾದ್ದರಿಂದ ಅವರ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಲಿದೆ ಎಂದರು.
ಇದನ್ನೂ ಓದಿ: ಕೇಂದ್ರ ಬಜೆಟ್ 2022: 400 ಹೊಸ ತಲೆಮಾರಿನ 'ವಂದೇ ಭಾರತ್ ರೈಲು' ಸೇರಿ ರೈಲ್ವೆ ಇಲಾಖೆಗೆ ಸಿಕ್ಕಿದ್ದೇನು?
ಕೋವಿಡ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವುದನ್ನು ಕೇಂದ್ರಿಕರಿಸಿರುವ ಬಜೆಟ್ ಇದಾಗಿದೆ. ಈ ಬಾರಿಯ ಬಜೆಟ್ನಿಂದ ದೇಶದ ಆರ್ಥಿಕ ಪ್ರಗತಿ ಸಾಧಿಸಲಿದೆ.
ಕಸ್ಟಮ್ಸ್ ಸುಂಕ ಕಡಿತದಿಂದ ಚಿನ್ನಾಭರಣಗಳ ಬೆಲೆ ಇಳಿಕೆಯಾಗಲಿದೆ. ಕೃಷಿಗೆ ಆರ್ಥಿಕ ನೆರವು ನೀಡುವುದು, ನದಿ ಜೋಡಣೆಯಂತಹ ಹತ್ತಾರು ಯೋಜನೆಗಳನ್ನು ಘೋಷಿಸುವ ಮೂಲಕ ಜನಪರ ಬಜೆಟ್ ಅನ್ನು ಮಂಡಿಸಲಾಗಿದೆ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ