ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಹಿರಂಗದ ಹಿಂದೆ ಯಾರ ನಾಯಕತ್ವ ಇದೆ ಎನ್ನುವ ಬಗ್ಗೆ ನಮಗೆ ಖಚಿತ ಮಾಹಿತಿ ಇದೆ. ಅದನ್ನು ಸದ್ಯದಲ್ಲೇ ಬಹಿರಂಗ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತೇಜೋವಧೆ ಮಾಡುತ್ತಾರೆ ಎನ್ನುವ ಉದ್ದೇಶದಿಂದ ಕೋರ್ಟ್ ಮೊರೆ ಹೋಗಬೇಕಾಯಿತು. ಈ ಸಿಡಿ ಹಿಂದಿನ ನಾಯಕತ್ವ ಯಾರದ್ದು ಎನ್ನುವ ಖಚಿತ ಮಾಹಿತಿ ಇದೆ. ಈಗ ನಾನೊಬ್ಬನೇ ಅದನ್ನು ಹೇಳಲ್ಲ. ಸದ್ಯದಲ್ಲೇ ಎಲ್ಲರೂ ಸೇರಿ ಮಾಹಿತಿ ಬಹಿರಂಗ ಮಾಡುತ್ತೇವೆ ಎಂದರು.
ರಾಜಕಾರಣ ಬೇರೆ, ವಿಶ್ವಾಸ ಬೇರೆ. ಎಲ್ಲಾ ಪಕ್ಷದಲ್ಲಿಯೂ ನಮಗೆ ಸ್ನೇಹಿತರಿದ್ದಾರೆ. ನಮ್ಮ ವಿರುದ್ಧ ಮಾಧ್ಯಮಗಳಲ್ಲಿ ವರದಿಗಳನ್ನು ತೋರಿಸಬಾರದು ಎನ್ನುವುದು ನಮ್ಮ ಉದ್ದೇಶವಲ್ಲ. ಈ ಹಿಂದೆಯೂ ಯಶವಂತಪುರ ಶಾಸಕ 890 ಕೋಟಿ ಲೂಟಿ ಎಂದು ಬಂತು. ಆಗಲೂ ಕೋರ್ಟ್ ಮೊರೆ ಹೋಗಿದ್ದೆ. ರಾಜಕೀಯವಾಗಿ ಎದುರಿಸುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಆದರೆ ಕ್ಷಣಮಾತ್ರದಲ್ಲಿ ಏನೇನೋ ತೋರಿಸಿ ನಮ್ಮ ತೋಜೋವಧೆಗೆ ಅವಕಾಶ ಆಗಬಾರದು. ಅದಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಸಿಡಿ ಪ್ರಕರಣ ಕುರಿತು ಬೇರೆ ತನಿಖೆ ಮಾಡಿದರೆ ನ್ಯಾಯ ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪ್ ಲೋಡ್ ಆಗಿರುವ ಕಾರಣ ಸಿಬಿಐಗೆ ಕೊಡಬೇಕು. ಯಾರು ಭಾಗಿಯಾಗಿದ್ದಾರೆ ಎಂಬ ಖಚಿತ ಮಾಹಿತಿ ಸಿಗಲಿದೆ ಎಂದರು.
ಇದನ್ನೂ ಓದಿ: ಯಾವ ಸಿಡಿ ಎಲ್ಲಿಟ್ಟಿದ್ದಾರೋ ಅಂತ ಅವರಿಗೆ ಭಯವಿದೆ, ರಕ್ಷಣೆಗಾಗಿ ಕೋರ್ಟ್ಗೆ ಹೋಗಿದ್ದಾರೆ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಆರು ಜನ ಮಾತ್ರ ಕೋರ್ಟ್ಗೆ ಹೋಗಿದ್ದಕ್ಕೆ ವಿಶೇಷ ಅರ್ಥ ಇಲ್ಲ. ಆ ಸಮಯದಲ್ಲಿ ಸಿಕ್ಕಿದವರು ಹೋದೆವು. ನಂತರ ಎಂಟಿಬಿ ನಾಗರಾಜ್, ಗೋಪಾಲಯ್ಯ, ಶಂಕರ್ ಸಿಕ್ಕಿದರು. ಈಗ ಎಲ್ಲರೂ ಮತ್ತೆ ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ತಿಳಿಸಿದರು.